ದಯವಿಟ್ಟು ಗಮನಿಸಿ ಚಿತ್ರಕ್ಕೆ ನಾ ಕಂಡ ಹಾಗೆ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾದ ಬಗ್ಗೆ ಬಹಳಷ್ಟು ಕಾತರ ಮೂಡಿಸಿದ್ದ ಸಿನಿಮಾದ ಹಾಡುಗಳು ಮತ್ತು ತುಣುಕುಗಳು, ಪ್ರೀಮಿಯರ್ ಶೋಗೆ ಟಿಕೆಟ್ ಖರೀದಿಸಿ ಹೋಗಲು ಪ್ರೇರೇಪಿಸಿತ್ತು. ಅಲ್ಲದೆ ಸಿನಿಮಾದಲ್ಲಿ ನನಗೆ ಮೆಚ್ಚುಗೆಯಾದ ಹಲವು ಕಲಾವಿದರಿದ್ದು, ಅವರನ್ನು ಭೇಟಿ ಮಾಡುವ ಅವಕಾಶ ಕೂಡ ದೊರಕಬಹುದೆಂದು ಪ್ರಧಾನ ಪ್ರದರ್ಶನಕ್ಕೇ ಹೋಗಿದ್ದೆವು.

ಸಂಚಾರಿ ಹಾಡು ಬಿಡುಗಡೆಯಾದಾಗಲೇ ನಾನು ಅವಿನಾಶ್ ಷಟಮರ್ಷಣ್ ಅವರ ಅಭಿನಯ ಆಶಾದಾಯಕವಾಗಿದೆ ಅಂತ ಬರೆದಿದ್ದೆ, ಸಿನಿಮಾದಲ್ಲಿ  ಅದು ನಿಜವೆನಿಸುತ್ತದೆ. ಸ್ವಾಮೀಜಿಯ ಪಾತ್ರಕ್ಕೆ ಹೇಳಿಮಾಡಿಸಿದ ಹಾವ-ಭಾವ, ಆ ಪಾತ್ರವೂ ನನಗೆ ವೈಯಕ್ತಿಕವಾಗಿ ಮೆಚ್ಚುಗೆಯಾಯಿತು. ಜೀವನದ ಹಲವು ಮಜಲುಗಳನ್ನು ಆ ಒಂದೇ ಪಾತ್ರದಲ್ಲಿ ತೋರಿಸಿದ್ದಾರೆ. ಹರೆಯದಲ್ಲಿ ಪ್ರೀತಿಗೆ ಬಿದ್ದು, ಪೋಷಕರ ವಿರೋಧಕ್ಕೊಳಗಾಗಿ ಭಗ್ನಪ್ರೇಮಿಯಾಗುವುದು; ಅದೇ ಹಠದಲ್ಲಿ ಪೋಷಕರನ್ನು ವಿರೋಧಿಸಿ ಜಾತಿ-ಮತಗಳ ಒಳ-ಹೊರಗುಗಳ ಹುಡುಕಾಟ, ಸಾಕಷ್ಟು ಅಲೆದಾಟದ ನಂತರ ವಾಸ್ತವದ ಸಾಕ್ಷಾತ್ಕಾರ, ಎಲ್ಲವೂ ನಮ್ಮ ಅರಿವಿಗೆ ಬಂದು ಹೋಗುವಷ್ಟರಲ್ಲಿ ತೆರೆಯ ಮೇಲೆ ತೋರಿಸಿ ಮುಗಿಸಿದ್ದಾರೆ ರೋಹಿತ್.

ರಾಜೇಶ್ ನಟರಂಗ ಹಾಗೂ ವಸಿಷ್ಠ ಅವರ ಕಥೆಗಳು ನಮ್ಮ ನಿಮ್ಮ ಜೀವನಕ್ಕೆ ಅತಿ ಹತ್ತಿರವಾದ ಪಾತ್ರಗಳು ಅನ್ನಿಸುವುದು ಖಂಡಿತ. ಆದರೆ ತೆರೆಯ ಮೇಲೆ ಈ ಎರಡು ಕಥೆಗಳು ಸ್ವಲ್ಪ ನಿಧಾನವೆನಿಸಿತು. ಇಬ್ಬರೂ ಅವರ ಪಾತ್ರಗಳನ್ನು ಸಹಜವಾಗಿ ನಿರ್ವಹಿಸಿದ್ದಾರೆ, ಪಾತ್ರಕ್ಕೆ ಬೇಕಾದಷ್ಟೇ ನಟನೆ. ವಸಿಷ್ಠ ಅವರನ್ನು ಹಲವರು, ಕನ್ನಡ ಚಿತ್ರರಂಗಕ್ಕೆ ದೊರಕಿದ ಹೊಸ ಲವರ್ ಬಾಯ್ ಅಂದಿದ್ದರಾದರೂ, ಎಲ್ಲಿಯೂ ಅವರ ನಟನೆ ಅತಿಯೆನಿಸುವುದಿಲ್ಲ, ಪೋಲಿ ಹುಡುಗನ ವರ್ತನೆಯೂ ಇಲ್ಲ.


ರಾಜೇಶ್ ಪಾತ್ರಕ್ಕೆ ಮದುವೆ ಪ್ರಸ್ತಾಪ ಮಾಡಿಕೊಂಡು ಬರುವ ಪ್ರಕಾಶ್ ಬೆಳವಾಡಿಯವರ ನಡೆ-ನುಡಿ, ಕೆಳ ಮಧ್ಯಮ ವರ್ಗದ ಕನ್ಯಾಪಿತೃವಿನಲ್ಲಿರುವ ತಳಮಳಗಳನ್ನು ನೈಜವಾಗಿ ತೋರಿಸಿದೆ. ಸಿನಿಮಾದಲ್ಲಿ ಒಂದು ಮೆಚ್ಚಲೇ ಬೇಕಾದ ಅಂಶವೆಂದರೆ, ಎಲ್ಲಾ ಪ್ರತಿಭಾವಂತ ಕಲಾವಿದರು ಸಿಕ್ಕಿದ್ದಾರೆಂದು, ಎಲ್ಲಿಯೂ ಯಾವ ಪಾತ್ರವನ್ನೂ ಬಲವಂತವಾಗಿ ತುರುಕುವ ಪ್ರಯತ್ನ ಮಾಡಿಲ್ಲ. ಸಿನಿಮಾದಲ್ಲಿ ಕಥೆಗಳದ್ದೇ ನೇತೃತ್ವ.

ಕೊನೆಯದಾಗಿ ರಘು ಮುಖರ್ಜೀ ಯವರ ಪಾತ್ರ ನಮ್ಮಂತಹ ಯುವಜನರಿಗೆ ಎಷ್ಟು ಪ್ರಸ್ತುತವೆನಿಸಿತು. “ಏನ್ ಗುರು ನಮ್ಮ ಲೈಫ್ ಇಷ್ಟು ಖರಾಬಾಗೋಗಿದೆ, ಸ್ವಲ್ಪ ಸರಿ ಮಾಡ್ಕೊಬೇಕು” ಅನ್ನೋ ಫೀಲಿಂಗ್ ಬರ್ಸೋದು ಗ್ಯಾರಂಟೀ… ಬಹಳ ಕಡಿಮೆ ಸಮಯ ತೆರೆಯ ಮೇಲೆ ಕಂಡರೂ ಭಾವನಾ ಮತ್ತು ಸಂಯುಕ್ತಾರ ಅಭಿನಯ ಕಥೆಗೆ ಒಪ್ಪುವ ಹಾಗಿದೆ. ಬುರುಡೀ ಬುದ್ಧಿ ಹಾಡು ಸಿನಿಮಾ ನೋಡುವ ಮೊದಲು ಅಷ್ಟು ವಿಶೇಷವೆನಿಸಿರಲಿಲ್ಲ, ಆದರೆ ಆ ಸನ್ನಿವೇಶಕ್ಕೆ ತಕ್ಕಹಾಗಿದೆ ಹಾಡು. ನಾಲ್ಕಾರು ಸಲ ಗುನುಗಿಕೊಳ್ಳುವಂತೆ ಮಾಡುತ್ತದೆ.


ಅರ್ಧ ಗಂಟೆಯನ್ನು ಮೀರದೆ ಮುಗಿದು ಹೋಗುವ ಒಂದೊಂದೂ ಕಥೆಗಳು, ನಮಗೋ ಅಥವಾ ನಮಗೆ ಗೊತ್ತಿರುವವರೊಬ್ಬರಿಗೋ ಹೋಲಿಸಿಕೊಳ್ಳಬಹುದಾದ ಪಾತ್ರಗಳನ್ನು ತಂದು ನಿಲ್ಲಿಸುತ್ತದೆ. ಒಟ್ಟಾರೆ ರೋಹಿತ್ ಚೊಚ್ಚಲ ನಿರ್ದೇಶನ ಯಶಸ್ವಿ ಅನ್ನಿಸಿದ್ದು ಮಾತ್ರವಲ್ಲ, ಅವರ ಕಥೆ ಹೆಣೆಯುವ ಸಾಮರ್ಥ್ಯದ ಬಗ್ಗೆ ಇನ್ನಷ್ಟು ನಿರೀಕ್ಷೆ ಮೂಡಿಸಿದೆ. ಇನ್ನಷ್ಟು ಹೊಸ ರೀತಿಯ ಸಿನಿಮಾಗಳು ನಿಮ್ಮಿಂದ ಬರಲಿ.

– ಧರಿತ್ರೀ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s