ಟೋಪಿ ವರ್ಗಾವಣೆ

ಒಮ್ಮೆ ಹೇಗೋ ೫೦ ರೂಪಾಯಿಯ ಖೋಟಾ ನೋಟು ನನ್ನ ಪರ್ಸ್ ಸೇರಿಕೊಂಡುಬಿಟ್ಟಿತ್ತು. ಹೇಗೆ ಬಂದಿರಬಹುದು ಅಂತ ಯೋಚಿಸುತ್ತಾ, ಬೆಳಗಿನಿಂದ ಎಲ್ಲೆಲ್ಲಿ ದುಡ್ಡು ಖರ್ಚುಮಾಡಿದೆ ಅನ್ನೋದನ್ನ ಮೆಲುಕು ಹಾಕುತ್ತಾ ಬಂದೆ. ಆಫೀಸಿನಿಂದ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೂರು ಹೊತ್ತು ಕಾಫಿ ಕುಡಿಯಲು ಹತ್ತಿರವೇ ಇದ್ದ ಹೋಟೆಲಿಗೆ ಹೋಗುವುದೊಂದು ಪದ್ದತಿಯಾಗಿಹೋಗಿತ್ತು. ಅಂದು ಬೆಳಿಗ್ಗೆಯೂ ಹೋಗಿದ್ದೆ. ಕಳ್ಳ ಆ ಹೋಟೆಲಿನವನೇ ಕೊಟ್ಟಿರೋದು ಖಚಿತವಾಗಿ ನನಗೇ ಟೋಪಿ ಹಾಕಿದ್ದಾನೆ, ನನಗೆ ಬಿದ್ದ ಟೋಪಿ ಅವನಿಗೇ ವರ್ಗಾವಣೆ ಮಾಡ್ತೇನೆ ತಡಿ ಅಂತ, ಖೋಟಾ ನೊಟನ್ನು ಜೇಬಿನಲ್ಲೇ ಇಟ್ಟುಕೊಂಡು ಮಧ್ಯಾಹ್ನವಾಗುವುದೇ ಕಾಯುತ್ತಿದ್ದೆ.

ಮಧ್ಯಾಹ್ನ ನಾನು ಮತ್ತು ಇನ್ನೊಬ್ಬ ಸಹೋದ್ಯೋಗಿ ಕಾಫಿ ಕುಡಿಯಲು ಅದೇ ಹೋಟೆಲಿಗೆ ಬಂದೆವು. ಆದರೆ ಗಲ್ಲದ ಮೇಲೆ ಬೆಳಿಗ್ಗೆ ಇದ್ದವ ಬೇರೆ, ಈಗ ಬೇರೊಬ್ಬ ಕೂತಿದ್ದಾನೆ. ಆದದ್ದು ಆಗಲಿ, ನಾನು ಖೋಟಾ ನೋಟನ್ನೇ ಅವನಿಗೆ ಕೊಡ್ತೀನಿ. ಅವನಿಗೆ ಅದು ತಿಳಿದು ಕೇಳಿದರೆ ನಿಮ್ಮ ಹೋಟೆಲಿನವರೆ ಕೊಟ್ಟಿದ್ದು ಅಂತ ಚನ್ನಾಗಿ ದಬಾಯಿಸ್ತೀನಿ ಅಂತ, ರಾಣಿ ಮಹಾರಾಣಿಯ ಮಾಲಾಶ್ರೀಯನ್ನು ನೆನೆಸಿಕೊಂಡು ಮನಸ್ಸಿನಲ್ಲೇ ಜಗಳಕ್ಕೆ ಸಿದ್ಧಳಾದೆ. ಊಟದ ಸಮಯವಾದ್ದರಿಂದ ಗಲ್ಲದ ಹತ್ತಿರ ಚೀಟಿ ಪಡೆಯಲು ಜನ ಕಿಕ್ಕಿರಿದಿದ್ದರು. ಆತ ಖೋಟಾ ನೋಟನ್ನು  ಗಮನಿಸುವುದು ಕಷ್ಟವೇ ಅಂದುಕಂಡು ಎರಡು ಕಾಫಿಗೆ ಚೀಟಿ ಕೇಳಿದೆ. ನೋಟು ಪಡೆದ ತಕ್ಷಣ ಆತ ಒಂದು ಮುಗುಳ್ನಗೆ ಬೀರಿದ. ನಾ ಕೊಟ್ಟಿದ್ದು ಅಸಲಿ ನೋಟಲ್ಲವೆಂದು ಅವನಿಗೆ ತಿಳಿದು ಹೋಯಿತೇ ಅಂತ ಸ್ವಲ್ಪ ಭಯವಾಗಿ ಅಲ್ಲಿಂದ ತಕ್ಷಣ ಕಾಫಿ ತೊಗೊಂಡು ಹೊರಗೆ ಬಂದು ನಿಂತೆ. ನನ್ನ ಸಹೋದ್ಯೋಗಿಯನ್ನು ಮಾತಿಗೆಳೆಯುತ್ತಾ, ಬೆಳಿಗ್ಗೆ ಗಲ್ಲದಲ್ಲಿ ಕೂತವ ಬೇರೆ ಅಲ್ಲವಾ ಅಂದೆ. ತಕ್ಷಣ ಅವರು ಇಂದು ಬೆಳಿಗ್ಗೆ ನಾವು ಯಾವುದೋ ಸಮ್ಮೇಳನಕ್ಕೆ ಹೋಗಿದ್ದು, ಕಾಫಿ ಕುಡಿಯಲು ಇಲ್ಲಿ ಬಂದೇ ಇರಲಿಲ್ಲ, ಬೆಳಿಗ್ಗೆ ಇದ್ದವ ಯಾರು ಅಂತ ಹೇಗೆ ಗೊತ್ತಾಗುತ್ತೆ ಅಂದರು. ನನಗೆ ಬಹಳ ಕಸಿವಿಸಿಯಾಗಿಹೋಯಿತು.

ಮತ್ತೆ ಈ ಖೋಟಾ ನೋಟು ನನಗೆ ಎಲ್ಲಿ ಜೋತುಬಿತ್ತಪ್ಪ ಅಂತ ನೆನಪಿಸಿಕೊಳ್ಳಲು, ಆಫೀಸಿಗೆ ಅಂದು ಆಟೋದಲ್ಲಿ ಬಂದದ್ದು ನೆನಪಾಗಿ ಆ ಚಾಲಕನ ಮೇಲೆ ವಿಪರೀತ ಸಿಟ್ಟು ಏರಿತು. ಹಿಡಿಹಿಡಿ ಶಾಪ ಹಾಕುತ್ತಾ, ಅವನು ನನಗೆ ಟೋಪಿ ಹಾಕಿದ, ನಾನು ಈ ಹೋಟೆಲಿನವನಿಗೆ ವರ್ಗಾಯಿಸಿದ, ಇವನು ಇನ್ನ್ಯಾರಿಗೋ ಅಂದುಕೊಂಡು ಆಫೀಸಿಗೆ ತಿರುಗಿ ನಡೆದೆ. ಆದರೂ ಯಾಕೋ ಮನಸ್ಸಿಗೆ ಸಮಾಧಾನವಾಗಲಿಲ್ಲ. ನನಗೆ ಯಾರೋ ಮೋಸ ಮಾಡಿದರು ಅಂತು ನಾನು ಬೇರೆ ಯಾರಿಗೋ ಮೋಸ ಮಾಡಿದೆನಲ್ಲಾ ಅಂತ ಅಪರಾಧಿಭಾವ ಕಾಡತೊಡಗಿತು. ಸಂಜೆ ಮನೆಗೆ ಹೋಗುವ ದಾರಿಯಲ್ಲಿ ರಾಯರ ಗುಡಿಗೆ ಹೋಗಿ, ೧೦೦ ರೂಪಾಯಿ ಹುಂಡಿಗೆ ಹಾಕಿ, ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಒಂದು ನಮಸ್ಕಾರ ಹಾಕಿ ಮನೆಗೆ ಹೊರಟೆ. ಸ್ವಲ್ಪ ಸಮಾಧಾನವಾಯಿತು.

ಮುಂದಿನ ಎರಡು ಮೂರು ದಿನ ಹೋಟೆಲಿಗೆ ಹೋಗಲು ಮುಜುಗರ, ಆದರೂ ತಲೆ ತಪ್ಪಿಸಿಕೊಂಡು ಹೇಗೋ ಕಾಫಿ ಕುಡಿದು ಬರುತ್ತಿದ್ದೆ. ಒಮ್ಮೆ ನಾನೆ ಕಾಫಿಗೆ ಚೀಟಿ ಕೊಳ್ಳಲು ಹೋಗಬೇಕಾಯಿತು. ನನ್ನ ಗ್ರಹಚಾರಕ್ಕೆ ಅಲ್ಲಿ ಆತನೇ ಇರಬೇಕೆ? ಸ್ವಲ್ಪ ಹಿಂಜರಿಕೆಯಲ್ಲೇ ಹೋಗಿ ೪ ಕಾಫಿ ಕೊಡಿ ಅಂದೆ. ಅವನು ನಗುತ್ತಾ, ಮೇಡಂ ಅವತ್ತು ಒಂದು ೫೦ರೂ ನೋಟು ಕೊಟ್ಟ್ರಲ್ಲ, ಅದು ಯಾಕೊ ಅಸಲಿ ಅಲ್ಲಾ ಅನ್ಸ್ತು, ಆದ್ರೂ ಪಾಪಾ ನೀವ್ಯಾಕೆ ನಕಲಿ ನೋಟು ಕೊಡ್ತೀರ, ನಿಮ್ಮ ಹತ್ತಿರಾನೂ ಗೊತ್ತಿಲ್ಲದೆ ಬಂದಿರಬಹುದು ಅಂತ ನಾನೆ ಇಟ್ಟುಕೊಂಡೆ ಅಂದ. ಇದೆಲ್ಲಿಗೆ ಬಂತಪ್ಪ, ೫೦ ರೂಪಾಯಿಗೆ ಮಾನ ಹೋಗ್ತಿದೆ ಅಂದುಕೊಳ್ಳುವಷ್ಟರಲ್ಲಿ ಆತನೇ ಮುಂದುವರೆಸಿದ. ಆ ನೋಟಿಗೆ ಮೇಣ ಮೆತ್ತಿತ್ತಂತೆ ಮೇಡಂ, ಅದು ಖೋಟಾ ನೋಟಲ್ಲ ಅಂದ್ರು ಬ್ಯಾಂಕಿನವರು ಅಂದ. ದೀರ್ಘ ನಿಟ್ಟುಸಿರು. ಹಲ್ಲು ಗಿಂಜುತ್ತಾ ಕಾಫಿ ಚೀಟಿ ಇಸ್ಕೊಂಡು ಬಂದೆ.

ಆದರೆ ಈ ಕಿರಿಕಿರಿ ಇಲ್ಲಿಗೆ ನಿಲ್ಲಲಿಲ್ಲ. ಅನಾವಶ್ಯಕವಾಗಿ, ಖೋಟಾ ನೋಟು ಕೊಟ್ಟಿದ್ದಾನೆಂದು ಆಟೋ ಚಾಲಕನ್ನ ಬೈದುಕೊಂಡದ್ದಕ್ಕೆ ಬೇಸರ ಶುರುವಾಯ್ತು. ಕೊನೆಗೆ ಸಂಜೆ ಮತ್ತೆ ರಾಯರ ಗುಡಿಗೆ ಹೋಗಿ ಒಂದು ಡೀಲ್ ಮಾಡಿಕೊಂಡು ಬಂದೆ. ನಾನು ಹುಂಡಿಗೆ ಹಾಕಿದ್ದ ೧೦೦ ರೂಪಾಯಿಯಲ್ಲಿ, ಹೋಟೆಲಿನವನಿಗೆ ಖೋಟಾ ನೋಟು ಕೊಟ್ಟ ಅಪರಾಧಿಭಾವಕ್ಕೆ ೫೦, ಆಟೋ ಚಾಲಕನನ್ನು ಬೈದುಕೊಡಿದ್ದಕ್ಕೆ ಮಿಕ್ಕ ೫೦ ತಪ್ಪು ಕಾಣಿಕೆ ಅಂತ. 😛

– ಧರಿತ್ರೀ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s