ಪೋಗುವೆ ಏತಕೆ ರಮಣೀ…

ಕಳೆದ ವಾರವೆಲ್ಲ ಕನ್ನಡದ ಹಳೆಯ ಸಿನಿಮಾ ಹಾಡುಗಳನ್ನು ಕೇಳುವ ಮನಸ್ಸಾಗಿತ್ತು. ಬೆರೆತ ಜೀವ ಸಿನಿಮಾದ ನನ್ನಧಾಟಿಯನೀನರಿಯೆ ಹಾಡನ್ನಂತೂ ಒಂದು ಹತ್ತು ಬಾರಿಯಾದರೂ ಕೇಳಿದೆ. ಹಾಗೇ ಹುಡುಕಿ ಹುಡುಕಿ ಹಲವಾರು ಹಾಡುಗಳನ್ನು ಕೇಳುತ್ತಿದ್ದಾಗ, ಪೋಗುವೆ ಏತಕೆ ರಮಣೀ ಹಾಡು ಕೇಳಲು ಸಿಕ್ಕಿತು. ಆ ಹಾಡು ಶುರುವಾದಂತೆಯೇ ಕಾಲೇಜಿನ ದಿನಗಳ ಒಂದು ಸನ್ನಿವೇಶ ನೆನಪಿಗೆ ಬಂದು ತಡೆಯಲಾರದ ನಗು ಉಕ್ಕಿಬಂತು.

ಅಂದು ಕಾಲೇಜು ಶುರುವಾದ ಮೊದಲನೇ ದಿನ. ಹೊಸ ವರ್ಷದ ಉದ್ಘಾಟನಾ ಸಮಾರಂಭ ಮುಗಿದು, ಬಿ.ಎಸ್ಸಿ ಸಿ.ಬಿ.ಝೀ ಯವರಿಗೆ ಕೊಠಡಿ ೨೬ ಎಂದು ನಿಗದಿಯಾಗಿದೆ ಎಂದು ಸೂಚಿಸಿದ್ದರು. ನಮ್ಮ ತರಗತಿಯನ್ನು ಹುಡುಕಿಕೊಂಡು ಹೋಗುತ್ತಿದ್ದೆವು. ನಡುವೆ ನಮ್ಮ ಕಾಲೇಜಿನ ಅತಿ ಪ್ರಸಿದ್ಧವಾದ ಸೋಂಬೇರಿಕಟ್ಟೆಯನ್ನು ಹಾದು ಹೋಗುವಾಗ, ಹಿಂದಿನಿಂದ ಒಬ್ಬ ಹುಡುಗ, ಪೋಗುವೆ ಏತಕೆ ರಮಣೀ… ಎಂದು ಹಾಡಲು ಶುರು ಮಾಡಿದ. ನಮ್ಮ ಸಹಪಾಠಿಯೊಬ್ಬ, ಹುಡುಗಿಯರನ್ನು ಚುಡಾಯಿಸುತ್ತಿದ್ದ ಹುಡುಗನ ಕಡೆಗೆ ನುಗ್ಗಿ, ಸುಮ್ಮನಿರಲು ಆಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಕ್ಕೆ ಎರಡು ಒದೆ ತಿಂದು ವಾಪಸ್ಸಾದ. ಮಿಕ್ಕ ಸಹಪಾಠಿಗಳು, ಅವರು ಅಂತಿಮ ವರ್ಷದ ಬಿ.ಎ ಹುಡುಗರು, ಸುಮ್ಮನೆ ಗಲಾಟೆ ಮಾಡಿಕೊಳ್ಳಬೇಡ ಎಂದು ಆ ಹುಡುಗನನ್ನು ಸಮಾಧಾನ ಪಡಿಸಿದರು. ಮೊದಲ ದಿನವಾದ್ದರಿಂದ ಹೆಚ್ಚು ಕಾಲ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳುವುದರಲ್ಲೇ ಮುಗಿಯಿತು. ಆದರೂ ಕಾಲೇಜಿನ ಮೊದಲ ದಿನವೇ ಹೀಗೆಲ್ಲ ನಡೆದುದಕ್ಕೆ ಒಂದು ಸಣ್ಣ ಭಯ ಶುರುವಾಗಿತ್ತು.

ಮತ್ತೆ ಮರುದಿನ ಬೆಳಿಗ್ಗೆ ಅದೇ ಸೋಂಬೇರಿ ಕಟ್ಟೆ ದಾಟಿ ಹೋಗಬೇಕಲ್ಲಾ ಎಂದು ಮರುಗುತ್ತಿದ್ದೆ. ಎಲ್ಲಾ ಹುಡುಗಿಯರೂ ಗೇಟಿನ ಮುಂದೆಯೇ ಭೇಟಿಯಾಗಿ ಒಟ್ಟಿಗೆ ತರಗತಿಗೆ ಹೋಗುವುದೆಂದು ನಿರ್ಧರಿಸಿದ್ದೆವು. ನಾಲ್ಕಾರು ಹುಡುಗರು ಹಾಡುಹೇಳುವುದು, ಹೊಸ ಹುಡುಗಿಯರಿಗೆ ಅಡ್ಡಹೆಸರುಗಳನ್ನು ನಿಗಧಿ ಮಾಡುವುದು ಹೀಗೇ ನಡೆದಿತ್ತು. ಒಮ್ಮೆ ನಾನು ಮತ್ತು ನನ್ನೊಬ್ಬ ಗೆಳತಿ ಮಾತ್ರ ಈ ದಾರಿಯಲ್ಲಿ ಸಾಗುವಾಗ ಅದೇ ಹುಡುಗ ಅದೇ ಹಾಡನ್ನು ಹಾಡಲು ಶುರುಮಾಡಿದ. ನಗುವುದೋ ಅಳುವುದೋ ತಿಳಿಯದೆ ಸರಸರನೆ ನಡೆದು ತರಗತಿ ಸೇರಿದೆವು. ವಿರಾಮದ ಸಮಯದಲ್ಲಿ ದಿನವೂ ಹೀಗೆ ಆದರೆ ಏನು ಗತಿಯೆಂದು ಒಂದೇ ಚರ್ಚೆ. ಕೊನೆಗೂ ಯಾರಿಗೂ ಆ ಹುಡುಗನನ್ನು ಎದುರಿಸುವ ಧೈರ್ಯವಾಗದೆ ಕಂಗಾಲಾಗಿದ್ದೆವು.

ಸಂಜೆ ಮನೆಗೆ ನನ್ನ ಇಬ್ಬರು ಗೆಳತಿಯರು ಬಂದಿದ್ದರು. ಮಹಡಿಯಲ್ಲಿ ಕುಳಿತು ಹರಟುತ್ತಿದ್ದ ನಮಗೆ ತಿಂಡಿ ಕೊಡಲು ನನ್ನ ಅಮ್ಮ ಬಂದರು. ಅವರಿಗೂ ನಮ್ಮ ಸಂಕಷ್ಟದ ಬಗ್ಗೆ ಹೇಳಿದೆವು. ನನ್ನ ಅಮ್ಮ ನಕ್ಕು ನಮಗೆಲ್ಲ ಒಂದು ಉಪಾಯವನ್ನು ಹೇಳಿಕೊಟ್ಟರು. ಆದರೆ ನಮ್ಮ ಕಷ್ಟ ಅಲ್ಲಿಗೇ ಮುಗಿಯಲಿಲ್ಲ. ಬೆಕ್ಕಿಗೆ ಗಂಟೆ ಕಟ್ಟುವವರಾರು? ಕೊನೆಗೂ ಎಲ್ಲರೂ ನನ್ನನ್ನೇ ಹುರಿದುಂಬಿಸಿದರು. ನಾನೂ ಒಪ್ಪಿಕೊಂಡೆ.ದಿನವೂ ಆ ಹುಡುಗ ನಮಗೆ ಎದುರಾಗದಿರಲಿ ಎಂದುಕೊಂಡು ಹೋಗುತ್ತಿದ್ದವರು, ಮರುದಿನ ಆತ ಎದುರಾಗಿ ಅದೇ ಹಾಡನ್ನು ಹಾಡಲಿ ಎಂದೆಣಿಸುತ್ತಿದ್ದೆವು. ಅಂದುಕೊಂಡಂತೆಯೇ ಆ ಹುಡುಗ ಎದುರಿಗೆ ಸಿಕ್ಕು, “ಪೋಗುವೆ ಏತಕೆ ರಮಣೀ” ಎಂದು ಹಾಡಿದ. ಕ್ಷಣಮಾತ್ರವೂ ತಡಮಾಡದೆ ನಾನೂ ಹಿಂತಿರುಗಿ, “ಹೋಗೆಲೊ ಆಚೆಗೆ ಸಗಣೀ” ಎಂದು ರಾಗವಾಗಿ ಹಾಡಿದೆ. ಪಾಪ, ಅವನ ಮುಖ ಪೆಚ್ಚಾಗಿ ಹೋಯಿತು. ನನ್ನ ಅಮ್ಮನ ಉಪಾಯ ಫಲಿಸಿತ್ತು. ದಿನವೂ ಹೆದರಿ ತಲೆ ತಗ್ಗಿಸಿ ಹೋಗುತ್ತಿದ್ದ ಹುಡುಗಿಯರು ಹೀಗೆ ತಿರುಗಿ ಬೀಳುತ್ತಾರೆಂದು ಅವನು ಊಹಿಸಿಯೂ ಇರಲಿಲ್ಲ. ಅಕ್ಕ ಪಕ್ಕದಲ್ಲಿ ನಿಂತಿದ್ದ ಅವನ ಸ್ನೇಹಿತರು ಕೂಡಾ ಗೊಳ್ಳೆಂದು ನಕ್ಕುಬಿಟ್ಟರು. ಅಂದಿನಿಂದ ಕಾಲೇಜಿನ ತುಂಬಾ ನಾವು ತಲೆ ಎತ್ತಿಕೊಂಡು ಓಡಾಡುತ್ತಿದ್ದೆವು, ಆತ ನಮ್ಮನ್ನು ಕಂಡರೆ ತಲೆ ತಗ್ಗಿಸಿ ನಡೆಯುತ್ತಿದ್ದ.

– ಗೋದಾವರೀ

4 thoughts on “ಪೋಗುವೆ ಏತಕೆ ರಮಣೀ…

  1. Baravanige tumba chennagidhe D. You should try some story writing. And coming back to the first day of CBZ the guy who got is Mr. Bhadri if I’m not wrong.. Lol..

    Like

Leave a comment