ಸಿನಿಮಾ ಶೀರ್ಷಿಕೆಯೇ ಸೀದಾ ಸಾದಾ ವಿಷಯ ಏನೆಂದು ಹೇಳುತ್ತೆ, ಬೋಳು ತಲೆಯೊಬ್ಬರ ಕಥೆಯಿದು ಅಂತ. ಸಿನಿಮಾದ ಪ್ರಚಾರ ತುಣುಕು ತುಂಬಾ ತಮಾಷೆಯಾಗಿತ್ತು, ಖಂಡಿತ ನೋಡ್ಬೇಕು ಅಂತ ಆಗಲೇ ಅನ್ನಿಸಿತ್ತು. ಸರಿ ನೆನ್ನೆ ಭಾನುವಾರ, ಸಿನಿಮಾ ನೋಡೋಕೆ ಹೋಗಿದ್ದ್ವಿ. ಒಂದು ಮೊಟ್ಟೆಯ ಕಥೆ ಸಿನಿಮಾ ನೋಡಕ್ಕೆ ಬಂದಿದ್ದೀವಿ ಅಂತ ಮುಖಪುಸ್ತಕದ ಗೋಡೆಯಮೇಲೆ ಬರೆದಿದ್ದೆ. ಸುಮಾರು ತೊಂಬತ್ತು ಜನ ಆ ಸ್ಟೇಟಸ್ಸನ್ನು ಲೈಕ್ ಮಾಡಿದ್ದಾರೆ. ನಾ ಸಿನಿಮಾ ನೋಡೋಕೆ ಹೋಗಿದ್ದೀನಿ ಅಂದ್ರೆ ಇಷ್ಟು ಜನಕ್ಕೆ ಯಾಕಪ್ಪ ಸಂತೋಷ ಅಂದ್ಕೋಡ್ರಾ? ವಿಷಯ ಅದಲ್ಲ, ಒಂದು ಮೊಟ್ಟೆಯ ಕಥೆ ಸಿನಿಮಾ ನೋಡೋಕೆ ಇನ್ನೊಂದು ಮೊಟ್ಟೆಯ ಜೊತೆ ಬಂದಿದ್ದೀನಿ ಅಂತ ಬರೆದಿದ್ದೆ. ಇನ್ನೊಂದು ಮೊಟ್ಟೆ ಅಂದ್ರೆ ನನ್ನ ಯಜಮಾನ್ರು 🙂 ಅದಕ್ಕೇ ಅಷ್ಟು ಜನ ಲೈಕ್ ಒತ್ತಿದ್ದರು. ಕಾರಣ ಏನೇ ಇರಲಿ, ಸಿನಿಮಾ ಮತ್ತು ಅದರ ಭಾವ ಇಷ್ಟು ಜನರನ್ನು ತಲುಪಿದೆ ಅನ್ನೋದೆ ಖುಷಿ.

ರಾಜ್ ಬಿ. ಶೆಟ್ಟಿಯವರ ಮೊದಲ ಪ್ರಯತ್ನ ಯಶಸ್ವಿಯಾಗಿದೆ ಅನ್ನೋದು ಸಂತೋಷದ ವಿಷಯ. ಈಗಿನ ಕಾಲದಲ್ಲಿ ನಮ್ಮ ಯುವಕರನ್ನ ಕಾಡ್ತಿರೊ ಅತಿ ದೊಡ್ಡ ಮತ್ತು ಬಹಳ ಭಾವನಾತ್ಮಕ ಸಮಸ್ಯೆಯ ಬಗ್ಗೆ ಒಳ್ಳೆ ಸಿನಿಮಾ ಮಾಡಿದ್ದಾರೆ. ಎಷ್ಟೋ ಜನಕ್ಕೆ ಬೊಕ್ಕತಲೆ ಹೇಗೆ ಕೀಳರಿಮೆಯು ಬರಿಸುತ್ತೆ, ನಾವೆಲ್ಲ ಬಾಹ್ಯಸೌಂದರ್ಯಕ್ಕೆ ಎಷ್ಟೆ ಬೆಲೆ ಕೊಡ್ತೀವಿ (unfortunately) ಅನ್ನೋದನ್ನ ಸರಳವಾಗಿದ್ದರೂ ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಜನಾರ್ಧನನ ಪಾತ್ರ ಕೂಡ ರಾಜ್ ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ, ಚೊಚ್ಚಲ ಪ್ರಯತ್ನ ಅನ್ನಿಸೋದೇಯಿಲ್ಲ. ಮದುವೆಯ ವಯಸ್ಸಿಗೆ ಬಂದಿರುವ ಬೊಕ್ಕತಲೆ ಹುಡುಗರ ಸಮಸ್ಯೆಯನ್ನು ಮಾತ್ರವಲ್ಲದೆ, ಹುಡುಗಿಯರಿಗೆ ಅವರ ಬಾಹ್ಯ ಸೌಂದರ್ಯದಿಂದ ಎದುರಾಗುವ ಸಮಸ್ಯೆಯನ್ನೂ, ಸರಳ ಎಂಬ ಪಾತ್ರದ ಮೂಲಕ ಬಹಳ ಸರಳವಾಗಿ ತೋರಿಸಿದ್ದಾರೆ. ನನಗೆ ಮದುವೆಗೆ ಹುಡುಗರನ್ನು ಹುಡುಕುವಾಗ, ನಾನು ತುಂಬಾ ಸಣ್ಣ (ಆಗ ಹಾಗಿದ್ದೆ) ಅಂತ ಬೇಡ ಅಂದವರೆಲ್ಲಾ ಒಮ್ಮೆ ಕಣ್ಣು ಮುಂದೆ ಬಂದು ಹೋದರು 😉

ಕೆಲವು ಕಡೆ ಸಿನಿಮಾ ಸ್ವಲ್ಪ ನಿಧಾನ ಅನ್ನಿಸಿದರೂ, ಬೊಕ್ಕತಲೆಯ ಸಮಸ್ಯೆಯನ್ನೂ ಮೀರಿ ಹಲವು ವಿಷಯಗಳನ್ನು ಸೂಕ್ಷ್ಮವಾಗಿ ಬಿಂಬಿಸಿದ್ದಾರೆ. ಉಪನ್ಯಾಸಕ ವೃತ್ತಿಯನ್ನು ಅದರಲ್ಲೂ ಕನ್ನಡ ಉಪನ್ಯಾಸಕರನ್ನು ಕಡೆಗಣಿಸುವುದಾಗಿರಲಿ, ಒಂದು ಸಂತೋಷವಾಗಿರುವ ಕುಟುಂಬ ಸರಳಾಳ ಮನಸ್ಸನ್ನು ಪರಿವರ್ತಿಸಿದ ಪರಿ, ನಮ್ಮ ಕೀಳರಿಮೆಯಿಂದ ನಾವು ಬೇರೆಯವರನ್ನು ನೋಡುವ ದೃಷ್ಟಿ ಹೇಗೆ ಬದಲಾಗುತ್ತೆ ಅನ್ನೋದನ್ನು ಜನಾರ್ಧನ ಮತ್ತು ಅವನ ತಮ್ಮನ ನಡುವಿನ ಸಂಬಂಧದಲ್ಲಿ, ಹೀಗೆ ಹಲವು ವಿಷಯಗಳನ್ನು ನೈಜವಾಗಿ ಚಿತ್ರಿಸಿದ್ದಾರೆ.

ಸಿನಿಮಾದ ಹಾಡುಗಳು ಚೆನ್ನಗಿವೆ. ಇಂಗ್ಲೀಷ್ ಮಿಶ್ರಿತ ಸಾಹಿತ್ಯವಾದರೂ, ಕೇಳಿ ನೋಡ್ರಿ ಹಾಡು ಇಷ್ಟವಾಯ್ತು. ಅದರಲ್ಲೂ ಅಣ್ಣಾವ್ರ ಹಾಡುಗಳನ್ನ ಸಮಯೋಚಿತವಾಗಿ ಬಳಸಿಕೊಂಡಿದ್ದಾರೆ. ಆದರೂ ಬಿಡಿ, ಈ ನಡುವೆ ಅಣ್ಣಾವ್ರ ಹೆಸರು ಹೇಳದೆ ಯಾರಿಗೂ ಸಿನಿಮಾ ಮಾಡೋಕೆ ಬರಲ್ಲ ಅನ್ಸುತ್ತೆ. ಸ್ವತಃ ಅಣ್ಣಾವ್ರ ಅಭಿಮಾನಿಯಗಿದ್ದು, ನನಗೇ ಎಷ್ಟೋ ಸಲ ಅತಿಯೆನ್ನಿಸುವಷ್ಟು ಅಣ್ಣಾವ್ರ ಖ್ಯಾತಿಯನ್ನು ಹಲವು ಸಿನಿಮಾಗಳಲ್ಲಿ ಬಳಸಿಕೊಳ್ತಾರೆ.

ಶ್ರೀನಿವಾಸನ ಪಾತ್ರವಂತೂ ವಿಶೇಷ ಮತ್ತು ಪ್ರಬುದ್ಧವಾಗಿದೆ. ಜೀವನದ ಅನುಭವಗಳ ಮುಂದೆ ಬೇರೆ ಪರಿಣಾಮಕಾರಿ ಪಾಠಗಳಿಲ್ಲ ಅನ್ನೋದು ಎಷ್ಟು ಸತ್ಯ. ಈ ಸಂದೇಶವನ್ನ ಚೊಕ್ಕಟವಾಗಿ ಚಿತ್ರಿಸಿದ್ದಾರೆ. “ನಿಮಗೆ ತಪ್ಪು ಮಾಡಿದ್ದೀನಿ ಅನ್ನಿಸ್ತಿದೆಯಾ? ಹೌದಾದರೆ ನೀವು ತಪ್ಪು ಮಾಡಿದ್ದೀರಿ” – ಈ ಮಾತು ವಿಷೇಶವಾಗಿ ಇಷ್ಟವಾಯ್ತು ನಂಗೆ. ನಮ್ಮ ಅಂತಃಸ್ಸಾಕ್ಷಿಗೆ ಸುಳ್ಳು ಹೇಳಿಕೊಳ್ಳೋಕೆ ಅಗೊಲ್ಲ ಅನ್ನೋದನ್ನ ಶ್ರೀನಿವಾಸ ಜನಾರ್ಧನನಿಗೆ ಎಷ್ಟು ಸಹಜವಾಗಿ ಮನದಟ್ಟು ಮಾಡ್ತಾನೆ.

ಒಟ್ಟಾರೆ ಸಿನಿಮಾದಲ್ಲಿ ಒಂದು ಒಳ್ಳೆ ಸಂದೇಶವಿದೆ. ಯುವಕರ ಪ್ರಸ್ತುತ ಸಮಸ್ಯೆಯೊಂದನ್ನ ಹಾಸ್ಯದಲ್ಲಿ ಬೆರೆಸಿ ನಮ್ಮ ಮುಂದಿಟ್ಟಿದ್ದಾರೆ. ತಮಾಷೆ ಮತ್ತು ಭಾವನಾತ್ಮಕ ದೃಶ್ಯಗಳನ್ನ, ಸಮಸ್ಯೆ ಎದುರಿಸುತ್ತಿರುವವರ ದೃಷ್ಟಿಯಿಂದ ತೋರಿಸಿದ್ದಾರೆ. ಒಂದು ಸಲ ಮನೆಯವರೆಲ್ಲರೂ ಕೂತು ನೋಡೋಕೆ ಚೆನ್ನಾಗಿದೆ. Kudos to Raj B. Shetty!

– ಧರಿತ್ರೀ

Advertisements

8 thoughts on “ಒಂದು ಮೊಟ್ಟೆಯ ಕಥೆ – Bald is beautiful

  1. ತುಂಬಾ ಚೆನ್ನಾಗಿದೆ ಓದುಗರ ಅನಿಸಿಕೆಗಳನ್ನು ಪೋಸ್ಟ್ ಮಾಡಿ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s