ಇಂಗ್ಲೀಷ್ ಅವಾಂತರ

ಸುಮಾರು ದಿನಗಳ ಹಿಂದೆ “ನಾಟಿ ಕೊತ್ತಂಬರಿ” ಕಥೆ ಹೇಳಿದಾಗಲೆ ಬರೆದಿದ್ದೆ, ಕಾಲೇಜಿನಲ್ಲಿದ್ದಾಗ ಹೀಗೇ ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡಲು ಹೋಗಿ ಆಗಿದ್ದ ಅವಾಂತರದ ಬಗ್ಗೆ ಬರೀತೀನಿ ಅಂತ. ಕೊನೆಗೂ ಕೂತು ಬರೆಯೊಕೆ ಪುರುಸೊತ್ತಾಯಿತು.

ಬೆಂಗಳೂರಿಗರು ನಾವೆಲ್ಲ “ನವೆಂಬರ್ ಕನ್ನಡಿಗರು” ಆಗಿ ಹೋಗಿದ್ದೀವಿ ಅಂತ ಈಗೆಲ್ಲ ಪೇಚಾಡ್ತೀವಿ. ಆದರೆ ನಾವು ಕಾಲೇಜಿನಲ್ಲಿದ್ದಾಗಲೇ ಕನ್ನಡ ಬಳಕೆಯನ್ನ ಹೆಚ್ಚಿಸೋದು ಹೇಗೆ ಅನ್ನೋದರ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದೆವು. ಮೊದಲು ನಾವು ಕನ್ನಡದಲ್ಲೇ ಮಾತಾಡೋ ಅಭ್ಯಾಸ ಮಾಡ್ಕೋಬೇಕು, ನಂತರ ಬೇರೆಯವರಿಗೆ ಅದೇ ಮಾದರಿಯಾಗುತ್ತೆ ಅಂತ ನಿರ್ಧಾರವಾಯ್ತು. ಹೇಗೂ ನವೆಂಬರ್ ತಿಂಗಳು, ರಾಜ್ಯೋತ್ಸವದ ಪ್ರಯುಕ್ತ ನಾವೆಲ್ಲ ತರಗತಿಗಳಲ್ಲಲ್ಲದೆ ಬೇರೆಲ್ಲೂ ಆಂಗ್ಲ ಭಾಷೆ ಉಪಯೋಗಿಸುವಂತಿಲ್ಲ, ಯಾರು ಹೆಚ್ಚು ದಿನಗಳು ಅಚ್ಚ ಕನ್ನಡದಲ್ಲೇ ಮಾತನಾಡ್ತಾರೊ, ಮುಂದಿನ ಸಭೆಗಳಲ್ಲೆಲ್ಲಾ ಅವರದ್ದೇ ಮುಂದಾಳತ್ವ ಅನ್ನೋ ಒಪ್ಪಂದವೂ ಆಯ್ತು.

ಕನ್ನಡದಲ್ಲೇ ಮಾತಾಡ್ಬೇಕು ಅಂತ ನಿರ್ಧಾರ ಆದ್ಮೇಲೇ ನಮಗೆಲ್ಲ ಆಂಗ್ಲ ಭಾಷೆಯ ಮೇಲೆ ಎಷ್ಟು ಅವಲಂಬನೆ ಬೆಳೆದಿದೆ ಅನ್ನೋ ಅರಿವಾಗಿದ್ದು. ಮೊದಲೆರಡು ದಿನಗಳಲ್ಲಿ ದಿನವಹಿ ಬಳಸೊ ಕನ್ನಡ ಪದಗಳಿಗೇ ಬಹಳ ತಡಕಾಡುತ್ತಿದ್ದೆವು. ಹಾಗೂ ಹೀಗೂ ಒಂದು ವಾರದೊಳಗೇ ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದೆವು. ಅಷ್ಟರಲ್ಲಿ ನಮ್ಮ ಸ್ನೇಹಿತರ ಗುಂಪಿನವರು ಹೀಗೆ ಕನ್ನಡದಲ್ಲೇ ಮಾತಾಡ್ತಿದ್ದೀವಿ ಅನ್ನೋ ಸುದ್ದಿ ಅರ್ಧ ಕಾಲೇಜಿಗೆ ಹಬ್ಬಿತ್ತು. ಎಲ್ಲರೂ ಪರೀಕ್ಷೆ ಮಾಡೋಕೆ ಅಂತಾನೆ ನಮ್ಮನ್ನ ಪದೇ ಪದೇ ಮಾತಾಡಿಸೋಕೆ ಶುರುಮಾಡಿದರು. ಎದುರಾಗುತ್ತಿದ್ದ ಸತ್ವಪರೀಕ್ಷೆ ಪಾರು ಮಾಡಿ ಉಸ್ಸಪ್ಪಾ ಅನ್ನೋಷ್ಟರಲ್ಲಿ ಇನ್ನ್ಯಾರೋ ಸಿಗುತ್ತಿದ್ದರು. ಒಟ್ಟಿನಲ್ಲಿ ಕನ್ನಡದಲ್ಲೇ ಮಾತಾನಾಡೋದು ನುಂಗಲಾರದ ಬಿಸಿ ತುಪ್ಪ ಆಗಿತ್ತು. ಆದರೂ ಮನೆಗೆ ಹೊರಡುವ ಮುಂಚೆ ಸೇರುತ್ತಿದ್ದ ಹರಟೆ ಕಟ್ಟೆಯಲ್ಲಿ ಇಡೀ ದಿನ ಎದುರಾದ ಪರೀಕ್ಷೆಗಳು ಅದನ್ನು ಎದುರಿಸಿದ ಪರಿಯ ಬಗೆಗೆ ಸವಿಸ್ತಾರ ವರ್ಣನೆ ನಡೆಯುತ್ತಿದ್ದವು.

ಅದು ನವಂಬರ್ ತಿಂಗಳ ಕೊನೆಯ ದಿನವಾಗಿತ್ತು. ಯಾರು ಅತಿ ಹೆಚ್ಚು ಕನ್ನಡದಲ್ಲೇ ಮಾತಾಡಿದ್ದರು ಅನ್ನೋದನ್ನು ಗುರುತಿಸಬೇಕಾದ ದಿನ. ಎಲ್ಲರೂ ಉತ್ಸುಕರಾಗೇ ಹರಟೆ ಕಟ್ಟೆಗೆ ಹೊರಟೆವು. ಅಲ್ಲಿ ನೋಡಿದರೆ ನಮ್ಮ ಗುಂಪಿನ ಇಬ್ಬರು ಹುಡುಗರ ಮಧ್ಯೆ ಹಣಾಹಣೆ ಜಗಳ ಹೊತ್ತಿಕೊಂಡಿತ್ತು. ವಿಪರೀತ ಕಾವೇರಿದ್ದ ಜಗಳ ಬಿಡಿಸೋಣವೆಂದರೆ, ಅವರ ಜಗಳಕ್ಕೆ ಕಾರಣ ನಮಗ್ಯಾರಿಗೂ ಗೊತ್ತಿಲ್ಲ. ಕೊನೆಗೆ ಸೋಲೊಪ್ಪಲೂ ಮನಸ್ಸಿಲ್ಲದೇ, ಜಗಳ ಮುಂದುವರಿಸಲೂ ಮನಸ್ಸಿಲ್ಲದೆ ಒಬ್ಬ ಹುಡುಗ, “ಮೊದಲೆ ನನಗೆ ಸಾಕಷ್ಟು ತಲೆ ಕೆಟ್ಟಿದೆ, ನೀ ಬೇರೆ ಬಂದು ಅವಳಂಡು ಮಾಡಬೇಡ ಹೋಗೊ” ಅಂದವನೆ ಅಲ್ಲಿಂದ ಹೊರಟು ಹೋದ. ಜಗಳವಾಡುತ್ತಿದ್ದ ಇನ್ನೊಬ್ಬ ಹುಡುಗನಿಗೆ ತಲೆ-ಬುಡ ಅರ್ಥವಾಗಲಿಲ್ಲ, ಅಲ್ಲೇ ನಿಂತಿದ್ದ ನಮಗೂ ಕೂಡ. ಜಗಳ ಯಾಕೆ ನಿಂತಿತು ಅಂತಲ್ಲ, ಅವನು ಹೇಳಿದ “ಅವಳಂಡು” ಪದದ ಅರ್ಥ ಗೊತ್ತಾಗದೆ. ನಮಗಲ್ಲದೆ ಬೇರೆ ಯಾರಿಗಾದರೂ ಅದರರ್ಥ ಗೊತ್ತಿದ್ದರೆ ನಮಗೆ ಅವಮಾನವಗುತ್ತೆ ಅಂತ ಯರೂ ಏನೂ ಮಾತಾಡದೆ ಅಲ್ಲಿಂದ ಸೀದಾ ತರಗತಿಗಳಿಗೆ ಹೊರಟೆವು. ಇಡೀ ದಿನವೆಲ್ಲಾ ತಲೆಯಲ್ಲಿ ಹುಳ. ಕೊನೆಗೆ ಸಂಜೆ ಆ ಹುಡುಗನನ್ನೇ ಕೇಳೋಣ ಅಂತ ನಿರ್ಧರಿಸಿ ಹರಟೆ ಕಟ್ಟೆಯ ಕಡೆ ನಡೆದೆವು. ಜಗಳ ಮರೆತು ಅವನೂ ಅಲ್ಲಿಗೆ ಬಂದಿದ್ದ. ಕುತೂಹಲ ತಡೆಯಲಾರದೆ ಎಲ್ಲರೂ ಒಕ್ಕೊರಳಲ್ಲೇ ಅವನ್ನನ್ನು ಕೇಳಿದೆವು. ಅದಕ್ಕೆ ಅವನಂದ – “Harass ಅನ್ನೋಕೆ ಕನ್ನಡದಲ್ಲಿ ಏನಂತಾರೆ ಅಂತ ಗೊತ್ತಾಗಲಿಲ್ಲ, ಅದಕ್ಕೆ ಅದನ್ನು ಬಿಡಿಸಿ “Her-ass” ಮಾಡಿ ಅದರ ಭಾಷಾಂತರವಾಗಿ ಅವಳಂಡು ಅಂದೆ”. ಎಲ್ಲರೂ ಬಿದ್ದೂ ಬಿದ್ದೂ ನಕ್ಕೆವು. ನಕ್ಕು ಸುಧಾರಿಸಿಕೊಂಡಮೇಲೆ ಕನ್ನಡಮ್ಮನಿಗೊಂದು ಜೈಕಾರ ಹಾಕಿ, ಇವತ್ತಿನವರೆಗೂ ಇಂಗ್ಲೀಷಿಗೆ ಅಧೀನರಾಗಿದ್ದೇವೆ.

– ಧರಿತ್ರೀ

 

 

Advertisements

2 thoughts on “ಇಂಗ್ಲೀಷ್ ಅವಾಂತರ

  1. ಯಪ್ಪಾ!!!!! ಸೂಪರ್ ಕ್ರಿಯೇಟೀವ್ ನಿಮ್ಮ ಫ್ರೆಂಡು….ಕನ್ನಡದಲ್ಲಿ ಕೆಲವು ಪ್ರದೇಶಗಳಲ್ಲಿ ‘ಹಳವಂಡ’ ಪದ ಇದೆಯಲ್ಲ. ಅದನ್ನು ಅವರು ಹೇಗೆ ಬಳಸುತ್ತಾರೆ ಕೇಳಬೇಕು.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s