ಇಂದು ಡಿ.ವಿ. ಗುಂಡಪ್ಪನವರ ೧೩೦ನೇ ಹುಟ್ಟುಹಬ್ಬ. ಅವರು ವಿಧಿವಶರಾಗಿ ನಾಲ್ಕು ದಶಕಗಳೇ ಕಳೆದಿದ್ದರೂ, ಅವರ ಕಗ್ಗಗಳಲ್ಲಿ ಅವರು ಇಂದಿಗೂ ಜೀವಂತ. ಅವರ ಒಂದು ಕಗ್ಗ ಜೀವತಾಳಿದ ಅನುಭವ ನನಗಾದದ್ದು ಹೀಗೆ.

ಹತ್ತನೇ ತರಗತಿಯಲ್ಲಿ ನಮ್ಮ ಪಠ್ಯಕ್ರಮದ ಭಾಗವಾಗಿ ಹತ್ತಾರು ಕಗ್ಗಗಳಿದ್ದವು. ಅದರ ಒಂದು ಕಗ್ಗದ ಪಾಠ, ವಾರದ ಕೊನೆಯಲ್ಲಿ ಮಾಡಿದ್ದರು. ಶನಿವಾರ ಅರ್ಧದಿನದ ಶಾಲೆಯಾದ್ದರಿಂದ, ತರಗತಿಗಳನ್ನು ಮುಗಿಸಿಕೊಂಡು ಬೇಗೆ ಮನೆಗೆ ಹೊರಟೆ. ದಾರಿಯಲ್ಲಿ ಅಂದು ಕಲಿತ ಕಗ್ಗವನ್ನು ಬಾಯಿಪಾಠಮಾಡಿಕೊಳ್ಳುತ್ತಾ ಮನೆ ಸೇರಿದೆ. ಸೋಮವಾರ ಕನ್ನಡ ತರಗತಿಯಲ್ಲಿ ನಾನೇ ಮೊದಲು ಒಪ್ಪಿಸಿಬಿಡಬೇಕೆಂಬ ಉತ್ಸಾಹ. 

ಭಾನುವಾರ ಒಂದು ಮದುವೆ ಸಮಾರಂಭಕ್ಕೆ ಹೋಗುವುದಿತ್ತು. ಮದುವೆಗೆಂದು ಹೊಸ ಬಟ್ಟೆ-ಬರೆಗಳನ್ನು ಹವಣಿಸಿಕೊಂಡು, ನನ್ನ ಸೋದರತ್ತೆಯ ಮನೆಗೆ ಹೊರಟೆ. ಮರುದಿನ ಬೆಳಗ್ಗಿನ ರೈಲಿಗೇ ಹೊರಡಬೇಕಾಗಿತ್ತು. ನನಗೆ ಅದೇ ಮೊದಲನೆ ಬಾರಿ ರೈಲಿನಲ್ಲಿ ಪ್ರಯಾಣ ಮಾಡುವ ಅವಕಾಶ ಸಿಕ್ಕಿದ್ದು, ಬಹಳ ಉತ್ಸುಕವಾಗಿದ್ದೆ. ರಾತ್ರಿ ಬೇಗ ಊಟ ಮುಗಿಸಿ, ಅತ್ತೆಯ ಮಕ್ಕಳ ಜೊತೆ ಆಟವಾಡುತ್ತಾ ಮಲಗಿಕೊಂಡೆ. ಮಧ್ಯರಾತ್ರಿಗೂ ಮೀರಿತ್ತು, ಪಕ್ಕದ ಕೋಣೆಯಲ್ಲಿ ಯಾರೋ ಅಳುವುದು ಕೇಳಿಸಿತು. ಸ್ವಲ್ಪ ಗಮನವಿಟ್ಟು ಕೇಳಿದರೆ, ನನ್ನ ಮಾವನ ಧ್ವನಿ. ನನ್ನ ಅತ್ತೆ ಅವರಿಗೆ ಸಮಾಧಾನ ಹೇಳುತ್ತಿದ್ದುದ್ದು ಕೇಳಿಸುತ್ತಿತ್ತು. ಬಹುಶಃ ಅವರ ಸಂಬಂಧದ ಪೈಕಿ ಯಾರೋ ತೀರಿಕೊಂಡಿರಬಹುದು ಎಂದೆಣಿಸಿ ಮತ್ತೆ ನಿದ್ದೆಗೆ ಜಾರಿದೆ.

ಬೆಳಿಗ್ಗೆ ನಮ್ಮನ್ನೆಲ್ಲಾ ಎಬ್ಬಿಸಿ ತಯಾರು ಮಾಡಿದ ಮೇಲೆ ಅತ್ತೆ ಹೇಳಿದಳು, ಹಿಂದಿನ ರಾತ್ರಿ ವಿಧಿವಶರಾಗಿರುವುದು ನನ್ನ ತಾತ ಎಂದು. ತನ್ನ ತಂದೆಯೇ ವಿಧಿವಶರಾಗಿದ್ದರೂ, ನನ್ನ ಸೋದರತ್ತೆಗೆ ಅದೆಲ್ಲಿಂದ ಅಷ್ಟು ಸಂಯಮ ಬಂದಿತ್ತೋ ಗೊತ್ತಿಲ್ಲ. ಎಲ್ಲರೂ ಆಟೋ ಮಾಡಿಕೊಂಡು ತಾತನ ಮನೆಗೆ ಹೊರಟೆವು. ಮತ್ತೆ, ದಾರಿಯುದ್ದಕ್ಕೂ ಬಾಯಿಗೆ ಬರುತ್ತಿದ್ದ ಸಾಲುಗಳು ಅವೇ,

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ|

ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು||

ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು|

ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ||

ಹಿಂದಿನ ದಿನವಷ್ಟೇ ಕಗ್ಗವನ್ನು ಬಾಯಿಪಾಠ ಮಾಡಲು ಉತ್ಸುಕಳಾಗಿದ್ದವಳಿಗೆ, ಅದರ ಅನುಭವವೇ ಆಗಬಹುದೆಂದು ಯಾರು ಎಣಿಸಿದ್ದರು. ಎಷ್ಟೇ ಸಮಾಧಾನ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಮದುವೆಗೋ ಮಸಣಕೋ… ಸಾಲು ಮಾತ್ರ ತಲೆಯಲ್ಲಿ ರೈಲಿನಂತೆ ಓಡುತ್ತಲೇ ಇತ್ತು. I miss you ತಾತ 😦

– ಧರಿತ್ರೀ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s