ಹೀಗೆ ಒಮ್ಮೆ ಎಲ್ಲರೂ ಒಟ್ಟಿಗೆ ಊಟಕ್ಕೆ ಕೂತಿದ್ದೆವು. ಮೊದಲೆಲ್ಲ ನಮ್ಮ ಮನೆಯಲ್ಲಿ ಇದು ಪದ್ದತಿಯೇ ಬಿಡಿ, ಎಲ್ಲರೂ ಕೆಲಸ, ಶಾಲೆ/ಕಾಲೇಜುಗಳಿಂದ ಬಂದಮೇಲೆಯೇ ಒಟ್ಟಿಗೆ ಕೂತು ಊಟ ಮಾಡುವುದು ನಿತ್ಯಕ್ರಮ. ಸರಿ, ಮಾತಿಗೆ ಮಾತು ಸೇರಿ ನಮ್ಮ ಬಾಲ್ಯ ಹಾಗಿತ್ತು ಹೀಗಿತ್ತು ಎಂಬ ಹರಟೆ ಚಾಲನೆಯಾಯ್ತು. ಇಷ್ಟು ಶುರುವಾದ ಮೇಲೆ ಮಾತು ನಿಲ್ಲಿಸಲು ನಮ್ಮಪ್ಪನಿಗೂ ಸಾಧ್ಯವಿಲ್ಲ, ಅವರಿಗೆ ಕಥೆ ಹೇಳುವ (ಜಂಬ ಕೊಚ್ಚಿಕೊಳ್ಳುವ) ಲಹರಿ ಬಂದಿತ್ತು. ಅವರ ಬಾಲ್ಯದ ಬಗ್ಗೆ, ತರಲೆ-ತುಂಟತನಗಳ ಬಗ್ಗೆ, ಒಂದಷ್ಟು ಕಥೆಗಳ ಸರಣಿ ಶುರುವಾಯಿತು. ಅದರಲ್ಲಿನ ಒಂದು ಕಥೆ ಇಲ್ಲಿದೆ. 

ನನ್ನ ತಾತ-ಅಜ್ಜಿಯರಿಗೆ (ಅಪ್ಪನ ಕಡೆ) ೧೨ ಜನ ಮಕ್ಕಳು. ಅದರಲ್ಲಿ ನಮಪ್ಪ ನಾಲ್ಕನೆಯವರು. ಸ್ವಭಾವತಃ ಉಲ್ಲಾಸಶೀಲರಾದ ನನ್ನ ಅಪ್ಪನಿಗೆ ಅವರ ತಮ್ಮ ತಂಗಿಯರು, ದೊಡ್ಡಪ್ಪಂದಿರು ಮತ್ತು ದೊಡ್ಡತ್ತೆಗೆ ಹೋಲಿಸಿದರೆ ಹೆಚ್ಚೇ ಅಂಟಿಕೊಂಡಿದ್ದರು. ಆಗಷ್ಟೆ ಅವರಿಗೆ ಬ್ಯಾಂಕ್ ಉದ್ಯೋಗವು ಸಿಕ್ಕಿ ಅವರದ್ದೇ ಸಂಪಾದನೆಯೂ ಇದ್ದಿದ್ದರಿಂದ, ಮನೆಯಲ್ಲಿನ ಕಿರಿಯರಿಗಾಗಿ ಏನಾದರು ಖರ್ಚು ಮಾಡಲು ಶಕ್ತ ಎಂಬ ಸಾತ್ವಿಕ ಜಂಭವು ಮೂಡಿತ್ತು. ಆ ಕಾಲದಲ್ಲೊ ಎಲ್ಲರಿಗೂ ಟೆಂಟಿನಲ್ಲಿ ಸಿನಿಮಾ ನೋಡುವ ಗೀಳು. ಒಂದೇ ಸಿನಿಮಾವನ್ನು ಪದೇ ಪದೇ ನೋಡಿದರೂ ಬೇಸರವಿಲ್ಲ, ಅದರಲ್ಲೂ ರಾಜ್ ಸಿನಿಮಾ ಅಂದರೆ ಕೇಳಬೇಕೆ? ಆದರೆ ಕರೆದುಕೊಂಡು ಹೋಗುವವರಾರು? ತಾತ ಹರಿಕಥೆ ಮಾಡುತ್ತಿದ್ದರಾದ್ದರಿಂದ ಅವರು ಊರಿನಲ್ಲಿ ಹೆಚ್ಚು ಇರುತ್ತಲೇ ಇರಲಿಲ್ಲ. ಅಜ್ಜಿಯ ಮೇಲೆ ಮನೆಯ ಪೂರ್ತಿ ಜವಾಬ್ದಾರಿ. ಹೇಗೂ ಈಗ ಹೊಸದಾಗಿ ಕೆಲಸ ಸಿಕ್ಕಿದ ಅಣ್ಣ ಇದ್ದಾನೆ, ಎಲ್ಲರೂ ಇವರ ಮೇಲೆ ದುಂಬಾಲು ಬೀಳುತ್ತಿದ್ದರು. ಸರಿ ಆಗಾಗ್ಗೆ ಇವರು ಎಲ್ಲರನ್ನು ಕಟ್ಟಿಕೊಂಡು ಸಿನಿಮಾಗೆ ಹೋಗುವುದು ಶುರುವಿಕ್ಕಿತು. ಆದರೆ ಪ್ರತೀ ಸಲವೂ ನಾನೇಕೆ ಎಲ್ಲರನ್ನು ಕರೆಯಬೇಕು ಅನ್ನೊ ಜಂಭ. ಹಾಗೆಂದು ಅವರು ಯಾರನ್ನೂ ಮಾತನಾಡಿಸುತ್ತಿರಲಿಲ್ಲವೆಂದಲ್ಲ. ಟೆಂಟಿಗೆ ಹೋಗುವ ದಾರಿಯುದ್ದಕ್ಕೂ ಒಬ್ಬರನ್ನೊಬ್ಬರು ಕಾಲೆಳೆಯುವುದು, ತಮಾಷೆ ಮಾಡುವುದು ನಡೆದೆ ಇರುತ್ತಿತ್ತು. ಆದರೂ ಸಿನಿಮಾಕ್ಕೆ ಹೋಗುವುದೆಂದರೆ ಎಲ್ಲರಿಗೂ ಮೊದಲೇ ತಿಳಿಸಿ, ತಯಾರಾಗಿ ಹೊರಡಲು ಸಮಯ ಕೊಡಬೇಕು. ಇನ್ನು ಮಾಡುವುದೆಂತು?

ಹೀಗಿದ್ದಾಗ ಕೊನೆಗೆ, ನಮ್ಮಪ್ಪನ ಒಂದು ಖಾಕಿ ಪ್ಯಾಂಟ್ ಸಹಾಯಕ್ಕೆ ಬಂತು. ಹೇಗೆ ಅಂತೀರ? ಅವರು ಖಾಕಿ ಪ್ಯಾಂಟ್ ಧರಿಸಿದರೆಂದರೆ ಸಿನಿಮಾಕ್ಕೆ ಹೊರಡುತ್ತಾರೆ ಎಂಬ ಪರಸ್ಪರ ಗ್ರಹಿಕೆ ಮೂಡಿತ್ತು. ಹೀಗೇ ಹತ್ತಾರು ಸಲ ಇವರು ಖಾಕಿ ಪ್ಯಾಂಟ್ ಧರಿಸುವುದು, ಇದನ್ನುಕಂಡು ಹಿಗ್ಗಿದ ನನ್ನ ಅತ್ತೆ, ಅವರ ಮಕ್ಕಳು ಮತ್ತು ಚಿಕ್ಕಪ್ಪಂದಿರ ಹಿಂಡು ಸಿನಿಮಾ ನೋಡಲು ತಯಾರಾಗುವುದು ನಡೆದಿತ್ತು. ಈ ಖಾಕಿ ಪ್ಯಾಂಟ್ ರೂಢಿ ನಿತ್ಯಕ್ರಮವಾಗಿ ಹೋಗಿ, ಅದರಲ್ಲಿನ ಸ್ವಾರಸ್ಯ ಕಡಿಮೆಯಾಯ್ತು. ಇನ್ನು ನಮ್ಮಪ್ಪ ತಮ್ಮ ತರಲೆ ತಲೆಗೆ ಕೆಲಸ ಕೊಡದೆ ಬಿಡ್ತಾರಾ?

ಒಮ್ಮೆ ಹೀಗೆ ಖಾಕಿ ಪ್ಯಾಂಟ್ ಧರಿಸಿ ಹೊರಟು ನಿಂತರು. ಇವರನ್ನು ಹಿಂಬಾಲಿಸಲು ಸೈನ್ಯವೂ ಸಿದ್ಧವಾಯಿತು. ಎಂದಿನಂತೆ ಟೆಂಟಿನ ದಾರಿ ಹಿಡಿದವರು, ಅರ್ಧದಲ್ಲಿ ದಾರಿ ಬದಲಿಸಿದರು. ಹಿಂದೆ ಬರುತ್ತಿದ್ದವರಲ್ಲಿ – “ಇವ್ನು ನಮ್ಮನ್ನ ಆಟ ಆಡ್ಸ್ಬೇಕು ಅಂತಾನೆ ಹೀಗೆ ಮಾಡ್ತಿದಾನೆ, ಏನೆ ಆಗ್ಲಿ ಇವತ್ತು ಅವ್ನ್ ಹಿಂದೇನೆ ಹೋಗೋಣ” ಅಂತ ಮಾತನಾಡಿಕೊಂಡರು. ಈ ಮಾತನ್ನು ಕೇಳಿಸಿಕೊಂಡೇ ಹೀಗೆ ಮಾಡಿದರೋ, ಅಥವ ಇದು ಪೂರ್ವಯೋಜಿತವೋ ಗೊತ್ತಿಲ್ಲ. ರಸ್ತೆಯಲ್ಲಿ ನಡೆಯುತ್ತಿದ್ದವರು ಸೀದಾ, ಯಾರು ಇಲ್ಲದ ಜಾಗದಲ್ಲಿ, ಗೋಡೆಯ ಕಡೆ ತಿರುಗಿ ಮೂತ್ರವಿಸರ್ಜನೆ ಮಾಡುವಂತೆ ನಟಿಸಿದರು. ಇವರನ್ನು ಹಿಂಬಾಲಿಸಿಯೇ ತೀರುತ್ತೇವೆ ಎಂದು ಪಣ ತೊಟ್ಟಿದ್ದವರು ಕಸಿವಿಸಿಗೊಂಡು ಮನೆಯೆ ಕಡೆಗೆ ಓಟ ಕಿತ್ತರು.

ಅಷ್ಟರಲ್ಲಿ ನಮ್ಮ ಊಟವೂ ಮುಗಿದಿತ್ತು. ಊಟದ ಸಮಯದಲ್ಲಿ ಇಂಥಾ ಕಥೆ ಹೇಳೊದಾ ಥೂ… ಎಂದು ರಾಗ ಎಳೆದು ನಾವೆಲ್ಲಾ ನಮ್ಮ ತಟ್ಟೆ ತೆಗೆಯಲು ತೊಡಗಿದೆವು. ಏಕೆಂದರೆ, ಕೊನೆಯಲ್ಲಿ ಊಟ ಮುಗಿಸಿದವರಿಗೆ ಗೋಮ ಹಚ್ಚುವ ಕೆಲಸ ಬೀಳೋದು ಗ್ಯಾರಂಟೀ!

– ಧರಿತ್ರೀ

Advertisements

5 thoughts on “ಖಾಕಿ ಪ್ಯಾಂಟ್ ಕಥೆ!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s