ಕೆಲವು ವಾರಗಳ ಹಿಂದೆ, ಕರಣಂ ಪವನ್ ಪ್ರಸಾದ್ ಅವರ ಗ್ರಸ್ತ ಕಾದಂಬರಿ ಓದಿದೆ. ಕೆಲಸದ ಒತ್ತಡದಲ್ಲಿ ನನ್ನ ಅನಿಸಿಕೆಗಳನ್ನು ಗೀಚಲು ಸಮಯವಾಗಿರಲಿಲ್ಲ. ಸಿಕ್ಕ ಕೊಂಚ ಸಮಯದಲ್ಲಿ, ಕಾದಂಬರಿಯಲ್ಲಿರುವ ಕೆಲವು ಮುದ್ರಣದೋಷಗಳನ್ನು ಸೂಚಿಸಿದೆ. ಬಹಳ ಮುಕ್ತವಾಗಿ ಪ್ರತಿಕ್ರಿಯಿಸಿದರು, ಮುಂದಿನ ಮುದ್ರಣಕ್ಕೆ ಸಹಾಯವಾಗುವುದು ಎಂದರು. ಆ ರೀತಿ ಪ್ರತಿಕ್ರಿಯಿಸುವುದು ಈಗಿನ ದಿನಗಳಲ್ಲಿ ತುಂಬಾ ವಿರಳವೇ.

ನಾನು ಹಿಂದೆಯೂ ಪವನ್ ಅವರ ಕಾದಂಬರಿ ಓದಿದ್ದೇನೆ. ಅವರ “ನನ್ನಿ” ಬಹಳವಾಗಿ ಕಾಡಿತ್ತು. ನಾನು ಕನ್ನಡ ಸಾಹಿತ್ಯ ಓದಲು ಶುರುವಿಕ್ಕಿ ಸುಮಾರು ೮-೯ ವರ್ಷಗಳಲ್ಲಿ ಭೈರಪ್ಪನವರದ್ದಲ್ಲದೆ ಮತ್ತೊಬ್ಬರ ಕಾದಂಬರಿ ಅಷ್ಟು ಕಾಡಿದ್ದು ಅದೇ ಮೊದಲ ಬಾರಿ. ನನ್ನಿ ಕಾದಂಬರಿಯ ಮೂಲಕ ಅವರ ಬರಹಕ್ಕೆ ಅವರೇ ಬಹು ಎತ್ತರದ ಮಾನದಂಡ ಸ್ಥಾಪಿಸಿದರು. ಇದೇ ನಿರೀಕ್ಷೆಯಲ್ಲಿ ಗ್ರಸ್ತ ಕಾದಂಬರಿ ಕೈಗೆತ್ತುಕೊಂಡೆ.

ವಿಜ್ಞಾನ ಮತ್ತು ವೇದಾಂತಗಳ ಸಮ ಸಂಯೋಜನೆಯಿರುವ ಬರಹ, ಕಾರಂಬರಿಗಳ ಹೊಸ ಪ್ರಕಾರವನ್ನೆ ಹುಟ್ಟುಹಾಕಿದೆ – Sci-Fi (science-fiction)ಯಿಂದ Sci-Phi(science-philosophy)ಯೆಡೆಗೆ.  ವಿಜ್ಞಾನದ ವಿವರಗಳನ್ನು ಕೇವಲ ಅವಿನಾಶನ ಪಾತ್ರ ರೂಪಿಸಲಿಕ್ಕಷ್ಟೆ ತುರುಕದೆ, ದೀರ್ಘವಾಗಿದ್ದರೂ ಪ್ರಸಕ್ತವಾಗಿ ವಿವರಿಸಿದ್ದಾರೆ. ಅವಿನಾಶನಂಥ ಅಸಾಮನ್ಯ ಬುದ್ದಿವಂತರು ನಮ್ಮ ಮಧ್ಯೆಯೆ ಇದ್ದು, ಬೇಡದ ಬಂಧನಗಳಲ್ಲಿ ಸಿಲುಕಿ, ಏನೇನೊ ಸಾಧಿಸಬಲ್ಲದ್ದನ್ನು ತೊರೆದು, ನಮ್ಮ ಮಧ್ಯೆಯೆ ಮರೆಯಾಗುತ್ತಿದ್ದಾರೋ ಎನಿಸುತ್ತದೆ. ಅವನ ಸಿಕ್ಕುಗಟ್ಟಿದ ಜೀವನ, ತಾಯಿ ತಂದೆಯರನ್ನು ಕಳೆದುಕೊಂಡ ಸನ್ನಿವೇಶಗಳು, ತನ್ನದಲ್ಲದ ಸಂಸಾರಕ್ಕೆ ಹೊಣೆಯಾಗುವುದು, ತನ್ನದಾಗಬೇಕಿದ್ದ ಸಂಸಾರದ ಕನಸ್ಸು ಇನ್ನೊಬ್ಬರ ಸ್ವಾರ್ಥಕ್ಕೆ ಬಲಿಕೊಡುವುದು, ಅರಸಿಕೊಂಡು ಬಂದ ಅವಕಾಶಗಳ ಬಗೆಗಿನ ವಿಮುಖತೆ, ಆದರೂ ತಾನಂದುಕೊಂಡದ್ದನ್ನು ಸಾಧಿಸುವ ಧೀಶಕ್ತಿ, ಯವುದೋ ಶಿತಿಲ ಕ್ಷಣದಲ್ಲಿ ಮಾಡಿದ ತಪ್ಪಿನ ಮೂಟೆ ಜೀವನದುದ್ದಕ್ಕೂ ಹೊತ್ತು ಸಾಗುವುದು – ಈ ಯಾವ ಸಂದರ್ಭಗಳಲ್ಲಿಯೂ ಅವನ ಅಂತರಂಗ ನನಗೆ ಅರ್ಥವೇ ಆಗಲಿಲ್ಲ. ವಿಚಿತ್ರವೆನಿಸಿದರೂ ಇಷ್ಟವಾಗುವ ಪಾತ್ರ.

ರೇಖಾಳ ಪಾತ್ರವು ಬಹಳ ಸಿಟ್ಟು ಬರಿಸಿದರೂ ಬಹಳ ವಿರಳವಾದ ವ್ಯಕ್ತಿತ್ವವೇನಲ್ಲ, ಇದಕ್ಕೆ ಸುಷ್ಮಳೂ ಹೊರತಲ್ಲ – ತಕ್ಕಮಟ್ಟಿಗೆ ಓದಿಕೊಂಡಿದ್ದು, ಉದ್ಯೊಗಾವಕಾಶಗಳನ್ನು ಗಿಟ್ಟಿಸಿಕೊಳ್ಳುವಷ್ಟು ಛಾತಿಯಿದ್ದು, ತಮ್ಮ ಸುಖಕ್ಕೆ ಕಡಿಮೆಯಾಗದಿರಲು ಯಾರನ್ನು ಎಷ್ಟು ನಯವಾಗಿ ಬಳಸಿಕೊಳ್ಳಬೇಕು ಎಂಬ ಬುದ್ದಿವಂತಿಕೆ… ರೇಖಾ ಜೋತುಬಿದ್ದ ಕಾರಣಕ್ಕೆ ಅವಿನಾಶನನ್ನು ಮದುವಯಾಗುವವಳಿದ್ದ ಸುಷ್ಮಾ ಯಾಕೆ ಒಂದುಬಾರಿಯೂ ಅವಿನಾಶನನ್ನು ಭೇಟಿ ಮಾಡಲಿಲ್ಲ? ತನ್ನಲ್ಲಿದ್ದ ಅಪರಾಧಿ ಭಾವವಾ? ಅಪ್ಪನ ಮಾತೇ ಸತ್ಯವೆಂಬ ನಂಬಿಕೆಯೋ, ಅಥವ ತೇಜ್ ಸಿಂಗ್ ನೊಂದಿಗೆ ತಾನು ಕಳೆದ ಸಮಯವನ್ನು ಸಮರ್ಥಿಸಿಕೊಳ್ಳಲಾಗದ ಸೋಲೋ? ಒಟ್ಟಿನಲ್ಲಿ ಸುಷ್ಮಾ ಮತ್ತೊಂದು ಮದುವೆಗೆ ತಯಾರಗುತ್ತಾಳೆ. ಈ ಪಾತ್ರಗಳಿಗಷ್ಟೇ ನೈತಿಕತೆಯ ಕೊರತೆಯೋ ಅಥವಾ ನಮ್ಮ ಸಮಾಜವೇ ಇಷ್ಟು ಡೀಲವಾದ ವ್ಯಕ್ತಿತ್ವಗಳನ್ನು ಹೊತ್ತು ಸಾಗುತ್ತಿದೆಯೋ?

ಶುರುವಿನಲ್ಲಿ ಗೋಪಿನಾಥರ ಪಾತ್ರದ ಬಗೆಗೆ ಬಹಳ ವಿಶೇಷವಾದ ಗೌರವ ಮೂಡಿದ್ದು, ವಂಶವೃಕ್ಷದ ಶ್ರೀನಿವಾಸ ಶ್ರೋತ್ರಿಗಳ ನೆನಪು ಹಾದು ಹೋಯಿತು. ಶ್ರೋತ್ರಿಗಳಷ್ಟು ಆಳವಾದ ವ್ಯಕ್ತಿತ್ವವಲ್ಲದಿದ್ದರೂ, ಗೋಪಿನಾಥರು ತಮ್ಮ ಅಕ್ಕನ ಅರಿವಿಗೆ ತರದೆ ಸತ್ಯವನ್ನು ಕಾಪಾಡಿಕೊಂಡು ಜಯಶ್ರೀಗೆ ಮಾಡಿದ ಸಹಾಯ, ಅದನ್ನು ಕೆಲ ಸಂದರ್ಭಗಳಲ್ಲಿ ನಿಭಾಯಿಸಿಕೊಂಡು ಹೋಗುವ ಧರ್ಮಸೂಕ್ಷ್ಮಗಳು, ಅವಿನಾಶನಿಗೆ ನೀಡಿದ ಬೆಂಬಲ ಎಲ್ಲವು ಗಣನೀಯ. ಅಂದಹಾಗೆ, ಒಬ್ಬ ದೇಶಸ್ಥ ಮಾಧ್ವರ ಮನೆಯಲ್ಲಿ ಬೆಳೆದ ಹೆಣ್ಣು ಮಗಳ ಗುಣಗಳು, ಯೋಚನಾ ಲಹರಿ, ಹಾವ-ಭಾವಗಳನ್ನು ಜಯಶ್ರೀಯ ಪಾತ್ರದಲ್ಲಿ ಬಹಳ ನೈಜವಾಗಿ ಚಿತ್ರಿಸಿದ್ದಾರೆ.

ಎಷ್ಟು ಸಂವೇದನಾಶೀಲ ಮನುಷ್ಯನೆನಿಸಿದರು, ಗೋಪಿನಾಥರು ತಮ್ಮ ಮಗಳನ್ನು ಅವಿನಾಶನಿಗೆ ಕೊಟ್ಟು ಮದುವೆ ಮಾಡಲು ಇಚ್ಛಿಸದೆ, ರೇಖಾಳ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡದ್ದು ಎಷ್ಟು ಮಾತ್ರ ಸರಿ? ಇರುವ ವಿಷಯವನ್ನು ಇದ್ದ ಹಾಗೆ ಹೇಳಿ, ಮಗಳನ್ನು ಅವಿನಾಶನಿಂದ ದೂರ ಇಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲವೆ? ಕನಿಷ್ಟಪಕ್ಷ ತಮ್ಮ ಆತ್ಮಸಾಕ್ಷಿಗೆ ಪ್ರಾಮಾಣಿಕವಾಗಿರುತ್ತಿದ್ದರೇನೊ. ಮಗಳಿಗೆ ಈ ಸಂಬಂಧದ ವಿಷಯ ತಿಳಿಸುವಲ್ಲಿ ಗೋಪಿನಾಥರು ಆಡಿದ ಜಾಣ ಮಾತುಗಳು, ಅರ್ಧ ಸತ್ಯಗಳು, ಮದುವೆಗೆ ಅವರಿಗಿರುವ ಅಸಮ್ಮತಿಯ ಕಾರಣವನ್ನೆ ಪ್ರಶ್ನಿಸುವಂತೆ ಮಾಡುತ್ತದೆ. ಅವರನ್ನು ಕಾಡಿದ್ದು ಅವಿನಾಶನ ಮೊದಲೇ ಗೋಜಲಾಗಿರುವ ಜೀವನವೋ ಅಥವ ಅವನ ಜಾತಿ ಶುದ್ಧತೆಯೋ?

ಕಡೆಯದಾಗಿ, ಪುಸ್ತಕದ ಅಡಿಬರಹ “ಹುಟ್ಟು ಮುಖ್ಯವಲ್ಲ, ಹುಟ್ಟಿನ ಪರಿಣಾಮ ಮುಖ್ಯ” ಬಹಳ ಇಷ್ಟವಾಯಿತು.

ಧರಿತ್ರೀ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s