ಭೈರಪ್ಪನವರ ಉತ್ತರಕಾಂಡ ಓದಿ ಮುಗಿಸಿದ 5-6 ದಿನಗಳ ನಂತರವೂ ಅದರ ಗುಂಗಿನಿಂದ ಹೊರಬರಲು ಸಾಧ್ಯವಾಗಿಲ್ಲ… ಸೀತೆಗಾದದ್ದು ಅನ್ಯಾಯ ಎಂಬುದನ್ನು ಒಪ್ಪಿಕೊಳ್ಳಲೇ ಕೊಂಚ ಸಮಯ ಹಿಡಿಯಿತು. ಚಿಕ್ಕಂದಿನಿಂದಲೂ ರಾಮನನ್ನು ದೇವರು ಎಂದು ಪೂಜಿಸಿ, ನನ್ನ ಅಮ್ಮ ಅಜ್ಜಿಯರು ಹೇಳುತ್ತಿದ್ದಂತೆ ರಾಮನಂಥ ಗಂಡನೇ ನನಗೂ ಸಿಗಲಿ ಎಂಬ ಭಾವನೆಗಳೊಂದಿಗೆ ಬೆಳೆದವಳಿಗೆ ರಾಮನ ಇನ್ನೊಂದು ಮುಖ ದರ್ಶನವಾದಂತಾಗಿದೆ.

ಏಕಪತ್ನೀವ್ರತಸ್ಥ, ಮರ್ಯಾದಪುರುಷೋತ್ತಮ, ಅನಂತಗುಣ, ದಯಾಸಾರ ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುವವನಲ್ಲೂ ನ್ಯೂನತೆಗಳಿರಬಹುದು, ಅಪೂರ್ಣತೆಯು ಸಹಜ ಎಂದು ಒಪ್ಪಿಕೊಳ್ಳಲು ಕಷ್ಟವೇ ಸರಿ.

ಏಕಪತ್ನೀವ್ರತಸ್ಥ – ಮದುವೆಯಾದ ಒಂದು ಹೆಣ್ಣನ್ನಲ್ಲದೆ ಬೇರೆ ಯಾವ ಹೆಣ್ಣಿನಮೇಲೂ ಅನ್ಯಭಾವ ಬರದೆ, ಒಂದೇ ಹೆಂಡತಿಯೊಂದಿಗೆ ಇಡೀ ಜೀವನ ಕಳೆಯುವುದು ಎಂದಷ್ಟೆ ಅರ್ಥವೇ? ಒಂದೇ ಹೆಂಡತಿಯ ಸಾಂಗತ್ಯದಲ್ಲಿ ಬದುಕುವುದು ಎಂದಲ್ಲವೆ… ಹಾಗೆ ನೋಡಿದರೆ, ಮದುವೆಯಾದ ಹೊಸದರಲ್ಲಿ ಅರಮನೆಯಲ್ಲಿ ಕಳೆದ ಸಮಯವಲ್ಲದೆ ಮತ್ತಾವ ದಿನದಲ್ಲೂ ಆಂತರಿಕ ಸಾಂಗತ್ಯವನ್ನು ಸೀತೆಗೆ ಕೊಡಲೇ ಇಲ್ಲವೆನ್ನಿಸುತ್ತದೆ. ವನವಾಸದ ಹೊಸದರಲ್ಲಿ, ನಿಸರ್ಗದ ಸೌಂದರ್ಯೋಪಾಸನೆಯಲ್ಲಿ ತೊಡಗಿದ್ದು ಬಿಟ್ಟರೆ ಹೆಚ್ಚಾಗಿ ಅವನು ಅಂತರ್ಮುಖಿಯಾಗಿಯೇ ಇರುತ್ತಿದ್ದನೆಂದು ಸೀತೆ ಕೊರಗುತ್ತಾಳೆ. ವಾಸ್ತವದಲ್ಲಿ, ರಾಮನು ಸಂಸಾರ ವ್ರತದಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಳ್ಳ ಲೆಯಿಲ್ಲ.

ಮರ್ಯಾದಪುರುಷೋತ್ತಮ – ಇದರ ಭಾವಾರ್ಥವನ್ನು ಎಣಿಸುವುದೇ ಕಷ್ಟವಾಗಿದೆ. ವಂಶ/ಸಮಾಜದ ಮರ್ಯಾದೆಯನ್ನು ಎತ್ತಿಹಿಡಿಯುವವನು ಎಂದೋ, ಲೋಕವು ಏನನ್ನು ಮರ್ಯಾದೆ ಎಂದು ಅಂದಾಜು ಮಾಡುವುದೊ ಆ ಅಂದಾಜಿಗೆ ಹೆದರಿ ಬದುಕುವುದೋ?

sita-requests-rama-to-fetch-illusory-golden-deer-ch74_lImage source: dollsofindia.com

ಅವನ ಪ್ರಜೆಗಳು ರಾಮನಲ್ಲಿ ಅತಿಯಾದ ಭಕ್ತಿ ಭಾವ ತೋರಿ ನಡೆಯುತ್ತಿದ್ದರು ಎಂದಾದಲ್ಲಿ ಅವರಿಗೆ ಸೀತೆಯ ಪರಿಶುದ್ದತೆಯನ್ನು ಅರ್ಥ ಮಾಡಿಸುವುದು ಕಷ್ಟವಾಗುತ್ತಿತ್ತೆ? ಅಥವಾ ದುರಾಚಾರದಲ್ಲಿ ತೊಡಗಿದ್ದ ಪ್ರಜೆಗಳಲ್ಲಿ ಶಿಸ್ತು ತರಲೆಂದು, ಅದೇ ಪ್ರಜೆಗಳ ಕಣ್ಣಲ್ಲಿ ನ್ಯಾಯಯುತವಾಗಿ ನಡೆಯುವ ಸಲುವಾಗಿ ತನ್ನ ಹೆಂಡತಿಯನ್ನೇ ತ್ಯಜಿಸಿದ ರಾಮನು ಲೋಕಕ್ಕ ಯಾವ ಸತ್ಸಂದೇಶವನ್ನು ಸಾರಲು ಹೊರಟ!

ತನ್ನ ಕಣ್ಣೆದುರೆ ತಂದೆಯನ್ನು ಅಷ್ಟು ನಿಕ್ರುಷ್ಟವಾಗಿ ಕಾಣುವ ಮಲತಾಯಿಯ ಮಾತಿಗಾಗಿ ೧೪ ವರ್ಷಗಳಕಾಲ ವನವಾಸವನ್ನು ಅನುಭವಿಸಲು ಸಿದ್ಧನಾಗುವ ರಾಮ, ಒಮ್ಮೆಯಾದರು ಶಾಂತವಾಗಿ ಕೂತು ತಂದೆಯ ಮಾತನ್ನು ಸಮಾಧಾನದಿಂದ ಕೇಳಲಿಲ್ಲವೇಕೆ? ಕೈಕೇಯಿಯ ಹಾರಾಟ ಆರ್ಭಟಕ್ಕೆ ಮಣಿದು ಉದ್ವೇಗದಿಂದ ನಿರ್ಧಾರವೇಕೆ ಮಾಡಿದ…

ಪಟ್ಟಾಭಿಶಿಕ್ತನಾಗಿ, ರಾಜನೂ ಆಗಲು ಶಕ್ತ್ಯನಾದವನ ಕರ್ತವ್ಯವು ಎರಡೂ ಪಕ್ಷಗಳ ಸಮರ್ಥನೆಯನ್ನು ಸಮಾಧಾನದಿಂದ ಕೇಳಿ ಸತ್ಯಾಸತ್ಯತೆಗಳನ್ನು ನಿಶ್ಪಕ್ಷಪಾತವಾಗಿ ಪರೀಕ್ಷಿಸಿ ನಿರ್ಧರಿಸುವುದಲ್ಲವೆ, ರಾಮ ಇಂಥ ಸಣ್ಣ ಸವಾಲನ್ನು ಎದುರಿಸಲಾರದೆ ಹೋದನೆ? ಇಲ್ಲಿ ಅವನ ತಂದೆಯ ಒಳಿತು, ತಾಯಿ ಮತ್ತು ಚಿಕ್ಕಮ್ಮ ಸುಮಿತ್ರೆಯ ಒಳಿತನ್ನು ಲಕ್ಷಿಸದೆ ಹೋದ.

ಮತೃಶ್ರೀ ಕೈಕೇಯಿದೇವಿ ಭರತನಿಗೇ ಪಟ್ಟಾಭಿಷೇಕವಾಗಬೇಕೇಂದು ಹಠಮಾಡಿದರೂ ಆಕೆಗೆ ಭರತನ ಆಡಳಿತ ಶಕ್ತಿ ಮತ್ತು ಆಸಕ್ತಿಗಳ ಮೇಲೆ ನಂಬಿಕೆ ಇರಲಿಲ್ಲವೆಂಬುದನ್ನು ರಾಮನು ಆಗಲೇ ಮನಗಂಡಿದ್ದ. ಇಂತಹ ಸಂದರ್ಭದಲ್ಲಿ, ರಾಜ್ಯದ ಕಳಕಳಿಯನ್ನು ಬಿಟ್ಟು ಒಂದು ದುಷ್ಟಬುದ್ದಿಯ ಹೆಣ್ಣಿನ ಕುಯುಕ್ತಿಯನ್ನು ಬೆಂಬಲಿಸಿದಂತಾಗಲಿಲ್ಲವೆ? “ತನ್ನ ಸುಖಕ್ಕಿಂತ ರಾಜ್ಯದ ಹಿತ ಹೆಚ್ಚಿನದು ಎಂಬ ಆಸಕ್ತಿ ಅವಳಿಗಿರಲಿಲ್ಲ” ಎನ್ನಲು ರಾಮನಿಗೇ ಸ್ವತಃ ಏನು ನೈತಿಕತೆಯಿದೆ.

ಕೊನೆಗೆ ವನವಾಸದಲ್ಲೂ, ಲಕ್ಷ್ಮಣನ ಮೇಲೆ ರಾಮ ಸೀತೆಯರ ಅವಲಂಬನೆಯ ವಿಸ್ತಾರವನ್ನು ಕಂಡಾಗ, ಲಕ್ಷ್ಮಣನ ನೆರವಿಲ್ಲದೆ ರಾಮನು ಸೀತೆಯನ್ನಾಗಲಿ ತನ್ನನ್ನಾಗಲಿ ಬಹುಶಃ ಸಮರ್ಥವಾಗಿ ರಕ್ಷಿಸಿಕೊಳ್ಳುತ್ತಿರಲಿಲ್ಲವೇನೋ.

ಇನ್ನೊಂದು ಸಂಗತಿ ನನ್ನ ಬುದ್ದಿಗೆ ತಿಳಿದದ್ದು. ಅನಸೂಯಾ ತಾಯಿಯು ಸೀತೆಗೆ ತನ್ನ ಆಭರಣಗಳನ್ನು ಕೊಟ್ಟು, ಅವಳಿಗೆ ಧರಿಸಲು ಹೇಳಿ, ರಾಮನನ್ನೂ ಕರೆದು, ಬ್ರಹ್ಮಚರ್ಯದ ಪಾಲನೆಗೆ ಇವೆಲ್ಲ ಅಡ್ಡಿಯಾಗಬಾರದು, ಇವೆಲ್ಲವನ್ನೂ ಮೀರಿ ಬ್ರಹ್ಮಚರ್ಯೆಯನ್ನು ಪಾಲಿಸುವ ಅಂತಃಶಕ್ತಿ ಸಾಧಿಸಬೇಕು ಎಂದಾಗ, ಸಾಂಕೇತಿಕವಾಗಿ ನಿನ್ನ ಪ್ರತಿಜ್ನೆ ಪ್ರಮಾಣಗಳನ್ನು ಪಾಲಿಸುವಲ್ಲಿ, ಸಹಧರ್ಮಿಣಿಯಾದ ಸೀತೆಯ ಆಸೆ ಆಕಾಂಕ್ಷೆ ಮನದ ಇಂಗಿತಗಳನ್ನು ಉದಾಸೀನದಿಂದ ಕಾಣಬೇಡ ಎಂಬ ಒಳ ಅರ್ಥವನ್ನು ತಿಳಿಸಿದರೇ?

ಲೋಕಾಪವಾದಕ್ಕೆ ಹೆದರಿ ಸೀತಯನ್ನು ಪರಿತ್ಯಜಿಸಿದನಷ್ಟೇ ಎಂಬುದು ಅರ್ಧ ಸತ್ಯವಾಗಬಹುದು. ರಾಮನಿಗೆ ಅಧಿಕಾರದ ಆಶೆಯಿಲ್ಲದಿದ್ದರೂ, ಸ್ವಾನುಕಂಪವೇ ಅವನ ಅಂತರಾತ್ಮವನ್ನು ಆಳುತ್ತಿತ್ತು ಎಂದು ನನಗೆ ತೋಚುತ್ತದೆ. ಸೀತೆಯನ್ನು ಲೋಕದ ಕಣ್ಣಿನಲ್ಲಿ ಪರಿತ್ಯಜಿಸಿದರೂ, ಅವನ ಮನಸ್ಸಿನಲ್ಲಿ ಅವಳೇ ನೆಲೆಸಿದ್ದು, ತಾನೂ ಅವಳಂತೆಯೇ ದರ್ಭೆಯ ಹುಲ್ಲಿನ ಮೇಲೆ ಮಲಗುತ್ತಿದ್ದು, ಇಂದಿಗೂ ಅವಳ ಸುವರ್ಣ  ಪುತ್ಥಳಿಯನ್ನೇ ಪಕ್ಕದಲ್ಲಿರಿಸಿಕೊಂಡಿದ್ದೇನೆ ಎಂದು ಸಮರ್ಥಿಸಿಕೊಳ್ಳುತ್ತಾನೆ.

ರಾಜ್ಯದ ಆಡಳಿತಕ್ಕಾಗಿ ಕರ ವಸೂಲಿಯನ್ನು ಕೈಗೊಂಡಾಗ, ತಮಗಾಗುವ ನಷ್ಟವನ್ನು ಸಹಿಸಲಾರದೆ ಕೆಲವು ಪುಂಡರು, ಬಹಿರಂಗವಾಗಿ ವಿರೋಧಿಸಲಾರದೆ, ಸೀತೆಯ ನೈತಿಕತೆಯನ್ನು ಜರಿಯಲಾರಂಭಿಸಿದರೆಂದು ತಿಳಿದವನು, ಅವರನ್ನು ತಿದ್ದಲು ಹೋಗದೆ ಸೀತೆಯನ್ನು ಶಿಕ್ಷಿಸಿ, ಇಂತಹ ಪುಂಡರ ಮಾತುಗಳಿಗೆ ಅನುಮೋದನೆ ನೀಡಿದನು.

ಯುದ್ಧದಲ್ಲಿ ಗೆದ್ದ ನಂತರ, ಲಕ್ಷ್ಮಣನ ಸಮ್ಮುಖದಲ್ಲೆ ನನ್ನ ಶೀಲವನ್ನು ನೀನು ಅನುಮಾನಿಸಲಿಲ್ಲವೆ ಎಂಬ ಪ್ರಶ್ನೆಗೆ ರಾಮನಲ್ಲಿ ಸಮರ್ಪಕವಾದ ಉತ್ತರವೇ ಇಲ್ಲ. ತನ್ನ ಆತಂಕ, ಯುದ್ಧದ ಬಳಲಿಕೆ ಉದ್ವಿಗ್ನಸ್ಥಿತಿಗಳನ್ನು ಕಾರಣವಾಗಿ ಒಡ್ಡಿದವನು, ಅನ್ಯ ದೇಶ, ಅಪರಿಚಿತರ ಸುತ್ತ, ರಾವಣನಂಥ ದುಷ್ಟನಿಂದ ತನಗಾಗಬಹುದಾದ ಹಾನಿಗಳನ್ನೆಣಿಸಿ, ಸೀತೆಯು ಪಟ್ಟ ಮಾನಸಿಕ, ದೈಹಿಕ ಬಳಲಿಕೆಯನ್ನು ಪರಿಗಣಿಸಲೇ ಇಲ್ಲ. ಇದು ಯಾವ ಮಹಾಪುರುಷನ ಚರ್ಯೆ.

ಅನುಮಾನವನ್ನು ಹೊತ್ತು ಸಿಂಹಾಸನದ ಮೇಲೆ ಕೂರುವುದು ಬೇಡವೆಂದು ತೀರ್ಮಾನಿಸಿ ನೀನು ಸಿಂಹಾಸನವನ್ನೇ ತ್ಯಾಗ ಮಾಡಬಹುದಿತ್ತು. ಅಣ್ಣನು ಸೀತೆಯನ್ನು ಪರಿತ್ಯಜಿಸಿದ ನಿರ್ಧಾರವನ್ನು  ಒಪ್ಪಿಕೊಳ್ಳದ ಲಕ್ಷ್ಮಣನು ರಾಜ್ಯವನ್ನೇ ತೊರೆದನಲ್ಲ — ಎಂಬೆಲ್ಲಾ ಸೀತೆಯ ವಾದಗಳಿಗೆ  ಮತ್ತೆ ರಾಮನಲ್ಲಿ ಉತ್ತರವಿಲ್ಲ.

“ಗಂಡನಿಂದ ತ್ಯಾಜ್ಯಳಾದ ಹೆಂಡತಿ ಈಸಬಹುದು, ಹೆಂಡತಿಯಿಂದ ತ್ಯಾಜ್ಯನಾದ ಗಂಡನ ಬದುಕು ದುರ್ಭರ” ಎಂದು ಹೇಳಿಕೊಳ್ಳುವ ರಾಮನ ಮನಸ್ಸು ಬಹಳ ಸ್ವಾನುಕಂಪಕ್ಕೆ ಒಳಗಾಗಿತ್ತಲ್ಲದೆ ಮತ್ತೇನು. ಗಂಡನಿಂದ ತ್ಯಾಜ್ಯಳಾದ ಹೆಂಡತಿಯು ಈ ಲೋಕದಲ್ಲಿ ಎದುರಿಸಬೇಕಾದ ನಿಂದನೆಯ ಪರಿವೂ ಬಹುಶಃ ರಾಮನಿಗಿರಲಾರದು. ಮಾನಸಿಕ, ದೈಹಿಕ, ಸಾಮಾಜಿಕ, ಬೌದ್ಧಿಕ ಯಾವ ಸ್ಥರದಲ್ಲೂ ರಾಮನು ಸೀತೆಗೆ ಜೊತೆಯಾಗಲಿಲ್ಲ.

ಜನ್ಮ ನೀಡಿದ ತಂದೆತಾಯಿಯರು, ಅಣ್ಣನು ಸಂಸಾರ ಸುಖಗಳನ್ನು ತ್ಯಜಿಸಿರುವಾಗ ತಾವು ಆ ಸುಖಗಳನ್ನು ಅನುಭವಿಸುವುದು ಹೇಗೆ ಎಂದು ತಮ್ಮ ಸುಖಗಳನ್ನು ತ್ಯಜಿಸಿದ ಭರತ ಶತ್ರುಘ್ನರು, ೧೪ ವರ್ಷಗಳು ಕಾಡಿನಲ್ಲಿ ಅಣ್ಣ ಅತ್ತಿಗೆಯರ ಕ್ಷೇಮ ಸೌಖ್ಯಗಳ ಹೊಣೆ ಹೊತ್ತಿದ್ದಲ್ಲದೆ, ರಾವಣರಾಜ್ಯದಲ್ಲಿ, ವಾಲಿ ಸಂಹಾರದಲ್ಲಿ ಎದೆ ಕೊಟ್ಟು ಕಾದಾಡಿದ ತಮ್ಮ ಲಕ್ಷ್ಮಣ, ಗಂಡಂದಿರ ಈ ಭಾವಗಳನ್ನರಿತು ನಡೆದ  ಊರ್ಮಿಳೆ, ಮಾಂಡವಿ, ಶ್ರುತಕೀರ್ತಿಯರು, ಮತ್ತು ತನ್ನ ಇಚ್ಛೆಯನ್ನರಿತು ನಡೆಯಲು ಸದಾ ಹವಣಿಸುತ್ತಿದ್ದ ಹೆಂಡತಿ ಸೀತೆ, ಯಾವ ಸಂಬಂಧಗಳಿಗೂ ಪೂರ್ಣ ನ್ಯಾಯ ಸಲ್ಲಿಸಲಿಲ್ಲ. ಕಡೆಗೆ ಮಲತಾಯಿಗೆ ಕೊಟ್ಟ ಮಾತನ್ನುಳಿಸಿಕೊಳ್ಳಲೇಬೇಕೆಂಬ ಪೊಳ್ಳು ಹಠಕ್ಕೆ ಕಟ್ಟು ಬಿದ್ದು, ಪ್ರಜೆಗಳಿಗೂ ಆದರ್ಶ ಪ್ರಭುವಾಗಲಿಲ್ಲ.

ಈ ಪೂರ್ಣ ಬರವಣಿಗೆ, ಉತ್ತರಕಾಂಡ ಕಾದಂಬರಿಯನ್ನು ಓದಿ ಆರ್ಥಮಾಡಿಕೊಂಡ ನೆಲೆಯಲ್ಲಿ ಮನಗಂಡ ನನ್ನ ಅಭಿಪ್ರಾಯಗಳಷ್ಟೆ. ನಾನು ವಾಲ್ಮೀಕಿ ರಾಮಯಣವನ್ನು ಪೂರ್ತಿಯಾಗಿ ಓದಿಲ್ಲ, ಮತ್ತು ಯಾರ ಭಾವನೆಗಳಿಗೂ ನೋವುಂಟು ಮಾಡುವ ಉದ್ದೇಶದಿಂದ ಇದನ್ನು ಬರೆದಿಲ್ಲ.

– ಧರಿತ್ರೀ

Advertisements

7 thoughts on “ಭೈರಪ್ಪನವರ ಉತ್ತರಕಾಂಡ ಕಾದಂಬರಿ, ನಾನು ಓದಿ ಅರ್ಥಮಾಡಿಕೊಂಡ ಪರಿ…

 1. ನೈಸ್. ಒಳ್ಳೆಯ ಬರಹ . ಈ ಬರಹಗಳಿಂದ ನಾನೂ ಕೂಡ ಆ ಕಾದಂಬರಿಯನ್ನು ಆದಷ್ಟು ಬೇಗ ಓದಬೇಕು ಎಂಬ ಹಂಬಲ ಮೂಡಿದೆ.

  ಒಂದು ಸಣ್ಣ ಮಾತು.

  >> ಯಾವುದೇ ರಾಜನ ಕರ್ತವ್ಯವು ಎರಡೂ ಪಕ್ಷಗಳ ಸಮರ್ಥನೆಯನ್ನು ಸಮಾಧಾನದಿಂದ ಕೇಳಿ ಸತ್ಯಾಸತ್ಯತೆಗಳನ್ನು ನಿಶ್ಪಕ್ಷಪಾತವಾಗಿ ಪರೀಕ್ಷಿಸಿ ನಿರ್ಧರಿಸುವುದಲ್ಲವೆ, ರಾಮ ಇಂಥ ಸಣ್ಣ ಸವಾಲನ್ನು ಎದುರಿಸಲಾರದೆ ಹೋದನೆ?

  ರಾಮನು ಆಗ ಇನ್ನೂ ರಾಜನಾಗಿರಲಿಲ್ಲ. ಧಶರಥನು ಆ ಕೆಲಸವನ್ನು ಮಾಡಬೇಕಿತ್ತು.

  Like

  1. ನಿಮ್ಮ ಮಾತು ಸತ್ಯ! ಆ ಸಂದರ್ಭದಲ್ಲಿ ರಾಮನು ಪಟ್ಟಾಭಿಶಿಕ್ತನಾಗುವವನಿದ್ದ. ಅಲ್ಲದೆ ದಶರಥನ ಮಾತಿಗೂ ಕಿವಿಗೊಡದೆ, ದಶರಥನ ನಿರ್ಧಾರವೇ ಅಂತಿಮ ಎಂದು ಸೂಚಿಸಿದ ಲಕ್ಷ್ಮಣನ ಮಾತನ್ನೂ ಲೆಕ್ಕಿಸದೆ ನಡೆಯುತ್ತಾನೆ. ಆದರೂ, ರಾಜ ಎಂಬ ಪದಬಳಕೆ ಇಲ್ಲಿ ಅಸಮಂಜಸ, ತಿದ್ದಿದ್ದೇನೆ…

   Like

   1. ನನ್ನಿ. ಉತ್ತರಕಾಂಡವನ್ನು ಎರಡನೆ ಬಾರಿ ಓದಿದಾಗ ಏನನ್ನಿಸಿತು ಅನ್ನೋದನ್ನೂ ಬರೆಯುತ್ತೀರಿ ತಾನೇ..

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s